ಸ್ವಸಹಾಯ ಸಂಘಗಳಿಂದ ಮಹಿಳೆ ಸ್ವಾವಲಂಬಿ

26 mlv 2
Published on

ಮಳವಳ್ಳಿ: ಪ್ರಸ್ತುತ ದಿನಮಾನಗಳಲ್ಲಿ ಪುರುಷರನ್ನು ಅವಲಂಬಿಸದೆ ಮಹಿಳೆಯರು ತಮ್ಮ ಕುಟುಂಬಗಳನ್ನು ನಿರ್ವಹಣೆ ಮಾಡಲು ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಬ್ಯಾಂಕ್ ಆಫ್ ಬರೋಡಾ ಶಾಖಾ ವ್ಯವಸ್ಥಾಪಕ ಸಂತೋಷ್‌ಕುಮಾರ್ ತಿಳಿಸಿದರು.


ಪಟ್ಟಣದ ರೈತ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯ ಮಹಿಳಾ ಕಳಂಜಿಯ ಒಕ್ಕೂಟ ಮತ್ತು ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಫೌಂಡೇಷನ್‌ನ 18ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರುಷನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ಆದರೆ ಬ್ಯಾಂಕ್‌ಗಳ ಸಹಯೋಗದಲ್ಲಿ ಸ್ವಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದ ನಂತರ ದಿನಗಳಲ್ಲಿ ಮಹಿಳೆಯರಿಗೆ ಆರ್ಥಿಕ ವಹಿವಾಟಿನ ಅರಿವು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು. ಇದರಿಂದ ಬ್ಯಾಂಕಿನ ಸಾಲ ಸೌಲಭ್ಯಗಳನ್ನು ಪಡೆದುಕೊಂಡ ಮಹಿಳೆಯರು ಸ್ವಾವಲಂಬಿ ಬದುಕಿಗೆ ಬೇಕಿರುವ ವೃತ್ತಿಗಳನ್ನು ನಡೆಸುತ್ತಿದ್ದಾರೆ. ಜತೆಗೆ ನಿಗದಿತ ಸಮಯಗಳಿಗೆ ಉತ್ತಮವಾಗಿ ಸಾಲ ಮರುಪಾವತಿ ಮಾಡಿಕೊಂಡು ಕುಟುಂಬದ ಬಲವರ್ಧನೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವಿಎಂಕೆ ಫೌಂಡೇಷನ್ ಮತ್ತು ಒಕ್ಕೂಟದ ವ್ಯವಸ್ಥಾಪಕ ಶಿವಶಂಕರ್ ವಾರ್ಷಿಕ ವರದಿಯನ್ನು ಮಂಡಿಸಿ ಮಾತನಾಡಿ, ಒಕ್ಕೂಟದ ವ್ಯಾಪ್ತಿಯ ಸಂಘಗಳಲ್ಲಿ 2022-23ನೇ ಸಾಲಿನಲ್ಲಿ 15 ಕೋಟಿ ರೂ. ಸಾಲ ಸೌಲಭ್ಯಗಳ ವಹಿವಾಟು ನಡೆಸಲಾಗಿದ್ದು, ನಿವ್ವಳ 1.80 ಕೋಟಿ ರೂ.ಆದಾಯ ಗಳಿಸುವುದರ ಜತೆಗೆ ಪದಾಧಿಕಾರಿಗಳಿಗೆ ಆದಾಯ ಹಂಚಿಕೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಕಾರ್ಯಕ್ರಮಲ್ಲಿ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಾಸುದೇವ್, ಎಂಎಂಕೆ ಫೌಂಡೇಷನ್ ವ್ಯವಸ್ಥಾಪಕ ಮಹದೇವು, ಒಕ್ಕೂಟದ ಅಧ್ಯಕ್ಷರಾದ ಸುನಂದಮ್ಮ, ಜಯಲಕ್ಷ್ಮೀ, ರೇಣುಕಮ್ಮ, ಸಿಬ್ಬಂದಿಗಳಾದ ಶೋಭಾ, ಇಂದ್ರಮ್ಮ, ಭಾನುಮತಿ, ಆರತಿ, ಭಾರತಿ ಸೇರಿದಂತೆ ಏಳು ನೂರಕ್ಕೂ ಅಧಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net