

ವಿಜಯವಾಣಿ ಸುದ್ದಿಜಾಲ ಶಿರಸಿ: ಸಮಾಜಕ್ಕೆ ಬಂದಿರುವ ಕರೊನಾ ವೈರಸ್ಸಿನ ಆಪತ್ತು ನಿವಾರಣೆಯಾಗಲೆಂದು ಮಠದಲ್ಲಿ ಅನೇಕ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಈ ಎಲ್ಲ ಕಾರ್ಯಕ್ರಮಗಳನ್ನೂ ಲಾಕ್ಡೌನ್ ನಿಯಮಕ್ಕನುಸಾರವಾಗಿಯೇ ನಡೆಸಲಾಯಿತು ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಮಾರ್ಚ್ 25ರಿಂದ ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ ಸಹಸ್ರಚಂಡೀಯಾಗ ಮಂಗಳವಾರ ಸಂಪನ್ನ ಗೊಂಡಿದ್ದು, ಈ ವೇಳೆ ಅವರು ಆಶೀರ್ವಚನ ನೀಡಿದರು.
ಮಹಾರೋಗದ ಭೀತಿ ಉಂಟಾದಾಗ ಚಂಡಿ ಸಪ್ತಶತಿಯ ಅನುಷ್ಠಾನ ಮಾಡುವ ಕ್ರಮ ವಿಶೇಷವಾಗಿದೆ. ಆದ್ದರಿಂದ ಚೈತ್ರ ಮಾಸ ಪೂರ್ತಿಯಾಗಿ ಚಂಡಿಯಾಗ ಹಂತಹಂತವಾಗಿ ಕೆಲವೇ ಕೆಲವು ವೈದಿಕರಿಂದ ನಡೆಯಿತು. ದಿನವೂ ಮೂರು ಅಥವಾ ನಾಲ್ಕು ಚಂಡಿ ಹವನಗಳು ನಡೆದು ಸಹಸ್ರಚಂಡಿಯಾಗ ಸಂಪನ್ನವಾಯಿತು ಎಂದು ತಿಳಿಸಿದರು.
ಇದಲ್ಲದೆ ಎಲ್ಲರೂ ಆರೋಗ್ಯವಂತ, ಆಯುಷ್ಯವಂತ ಆಗಲೆಂಬ ಸದಾಶಯದಿಂದ ದೊಡ್ಡ ಪ್ರಮಾಣದಲ್ಲಿ ಮಹಾಮೃತ್ಯುಂಜಯ ಹವನ, ಧನ್ವಂತರಿ ಹವನ, ಸಹಸ್ರ ವಿಷ್ಣು ಸಹಸ್ರನಾಮ ಪಾರಾಯಣ, ಮೃತ್ಯುಭಯ ನಿವಾರಣೆಯ ಉದ್ದೇಶದಿಂದ ವಿಧಿಸಿದ ಜನಮಾರಶಾಂತಿ, ಮಹಾರುದ್ರ ಪಾರಾಯಣ ಮತ್ತು ಅಭಿಷೇಕ, ಮೂವತ್ತೆರಡು ಸಾವಿರ ಲಕ್ಷ್ಮೀನೃಸಿಂಹ ಜಪ ಮತ್ತು ಹವನ, ಲಕ್ಷ್ಮೀನೃಸಿಂಹ ದೇವರಿಗೆ ಹತ್ತುಸಾವಿರ ತುಳಸಿ ಅರ್ಚನೆ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಒಳ್ಳೆಯ ಪರಿಣಾಮಗಳಾಗಿವೆ ಎಂದು ಹೇಳಿದರು.
ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ ಅವರು ಮಠದದಲ್ಲಿ ನಡೆಸಿದ ಧಾರ್ವಿುಕ ಅನುಷ್ಠಾನಗಳಿಗೆ ದೇಣಿಗೆ ನೀಡಿದವರನ್ನು, ಅವಿರತವಾಗಿ ಶ್ರಮಿಸಿದ ವೈದಿಕರನ್ನು ಹಾಗೂ ಮಠದ ಸಿಬ್ಬಂದಿ ಅಭಿನಂದಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಉಪಸ್ಥಿತರಿದ್ದರು.
ಲಾಕ್ಡೌನ್ ಕಾರಣದಿಂದ ಶ್ರೀಲಕ್ಷ್ಮೀನೃಸಿಂಹ ಮಹಾರಥೋತ್ಸವವನ್ನು ಕೈಬಿಡಲಾಗಿದೆ. ಆದರೂ ದೇವರ ಕೃಪೆ ಎಲ್ಲರ ಮೇಲೆ ಇರಲಿ ಎಂಬ ಕಾರಣದಿಂದ ಲಕ್ಷ್ಮೀನೃಸಿಂಹಮಂತ್ರ ಜಪ, ಹವನಗಳು ನಡೆಯುತ್ತವೆ. ಅವು ಏ. 25ರಿಂದ ಮೇ 4ರವರೆಗೆ ಹತ್ತು ದಿನಗಳಲ್ಲಿ ಸಂಪನ್ನಗೊಳ್ಳಲಿವೆ. 3.20 ಲಕ್ಷ ಜಪ ಮಾಡಿ ಮೂವತ್ತೆರಡು ಸಾವಿರ ಜಪದಿಂದ ಹವನ ನಡೆಯುತ್ತದೆ. ಇದಲ್ಲದೇ ಮೇ 5, 6, 7ರಂದು ಲಕ್ಷ್ಮೀ ನೃಸಿಂಹ ಜಯಂತಿ ಉತ್ಸವವನ್ನು ಸಂಕ್ಷಿಪ್ತವಾಗಿ ನಡೆಸಲಾಗುವುದು. | ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶ್ರೀ ಸ್ವರ್ಣವಲ್ಲೀ ಮಠ