ಸ್ವಯಂಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಳ್ಳಿ

25 YLP 01
Published on

ಯಲ್ಲಾಪುರ: ಪಟ್ಟಣದಲ್ಲಿ 15 ದಿನಗಳ ಒಳಗಾಗಿ ಎಲ್ಲ ಅಂಗಡಿಗಳ ಮಾಲೀಕರು ಹಾಗೂ ಕೆಲಸಗಾರರು ಕರೊನಾ ತಪಾಸಣೆಗೆ ಒಳಪಡಬೇಕು. ತಪಾಸಣೆ ಮಾಡಿಸಿಕೊಳ್ಳದಿದ್ದರೆ, ಕರೊನಾ ಪ್ರಮಾಣಪತ್ರ ಹೊಂದಿರದ ಅಂಗಡಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪ.ಪಂ. ಮುಖ್ಯಧಿಕಾರಿಗೆ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೂಚಿಸಿದರು.

ಕರೊನಾ ನಿಯಂತ್ರಣ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಧಾರ್ವಿುಕ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ತಪಾಸಣೆಗೆ ಹೋದವರಿಗೆಲ್ಲರಿಗೂ ಪಾಸಿಟಿವ್ ವರದಿ ನೀಡಲಾಗುತ್ತಿದೆ. ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಮಾಡಿದರೆ ಅಧಿಕಾರಿಗಳಿಗೆ ಹಣ ಸಿಗುತ್ತದೆ ಎಂಬ ವದಂತಿ ಹಬ್ಬಿದೆ. ಜನ ಇದನ್ನು ನಂಬಿದ್ದಾರೆ. ಆದರೆ, ಇದೆಲ್ಲವೂ ಸುಳ್ಳು. ಇಂತಹ ವದಂತಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸೋಂಕಿತರ ಚಿಕಿತ್ಸೆಗೆ ಎಷ್ಟು ಖರ್ಚಾಗಿದೆಯೋ ಅಷ್ಟನ್ನು ಮಾತ್ರ ನೀಡುತ್ತದೆ. ಸ್ವಯಂಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.

ಜನರಿಗೆ ಅರಿವು ಮೂಡಿಸುವ ಮೂಲಕ ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಬರುವಂತೆ ಪ್ರೇರೇಪಿಸುವ ಕಾರ್ಯವನ್ನು ಧಾರ್ವಿುಕ ಮುಖಂಡರು ಮಾಡಬೇಕು. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, 60 ವರ್ಷ ಮೇಲ್ಪಟ್ಟವರನ್ನು ತಪಾಸಣೆ ನಡೆಸುವುದು ಮೊದಲ ಆದ್ಯತೆಯಾಗಿದೆ. ಅಂಥವರ ಪಟ್ಟಿ ತಯಾರಿಸಲಾಗಿದ್ದು, ಅವರಿಗೆ ಕಡ್ಡಾಯವಾಗಿ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾತನಾಡಿ, ಕೆಲವೆಡೆ ತಪಾಸಣೆಗೆ, ಚಿಕಿತ್ಸೆಗೆ ಮನೆಯ ಬಾಗಿಲಿಗೆ ಹೋದರೆ ಭಿಕ್ಷುಕರಿಗಿಂತ ಕಡೆಯಾಗಿ ನಮ್ಮನ್ನು ನೋಡುತ್ತಿದ್ದು, ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಇಷ್ಟಾಗಿಯೂ ತಪಾಸಣೆ, ಚಿಕಿತ್ಸೆ ಕರ್ತವ್ಯ ನಿಭಾಯಿಸುತ್ತಿದ್ದೇವೆ. ಯಲ್ಲಾಪುರದಲ್ಲಿ ಈವರೆಗೆ 3500ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದ್ದು, 180 ಜನರಿಗೆ ಮಾತ್ರ ಸೋಂಕು ಬಂದಿದೆ. ತಪಾಸಣೆ ನಡೆಸಿದವರಿಗೆಲ್ಲ ಪಾಸಿಟಿವ್ ಬರುತ್ತದೆ ಎಂಬುದು ನಿಜವಾಗಿದ್ದರೆ ಯಲ್ಲಾಪುರದಲ್ಲಿ 3500 ಪ್ರಕರಣಗಳು ಇರಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ಪ.ಪಂ. ಮುಖ್ಯಾಧಿಕಾರಿ ಅರುಣ ನಾಯ್ಕ, ತಾ.ಪಂ. ಇಒ ಜಗದೀಶ ಕಮ್ಮಾರ, ವಿವಿಧ ಧರ್ಮಗಳ ಸಂಘಟನೆಯ ಪ್ರಮುಖರಾದ ರಾಮು ನಾಯ್ಕ, ಬಾಬಾಸಾಬ್ ಅಲನ್, ನಾರಾಯಣ ನಾಯಕ, ಮಾಧವ ನಾಯಕ, ವಿಲ್ಸನ್ ಫರ್ನಾಂಡೀಸ್ ಇತರರಿದ್ದರು.

136 ಜನರಿಗೆ ಕರೊನಾ: ಕಾರವಾರ: ಜಿಲ್ಲೆಯ 136 ಜನರಿಗೆ ಕರೊನಾ ಇರುವುದು ಮಂಗಳವಾರ ಖಚಿತವಾಗಿದೆ. ಅಂಕೋಲಾದಲ್ಲಿ 32, ಕಾರವಾರದಲ್ಲಿ 3, ಕುಮಟಾದಲ್ಲಿ 4, ಹೊನ್ನಾವರದಲ್ಲಿ 17, ಭಟ್ಕಳದಲ್ಲಿ 8, ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 7, ಮುಂಡಗೋಡಿನಲ್ಲಿ 21, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 32 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಒಟ್ಟಾರೆ ಇದುವರೆಗಿನ ಸೋಂಕಿತರ ಸಂಖ್ಯೆ 4180 ಕ್ಕೇರಿದೆ.

ಕಾರವಾರ ಹಾಗೂ ಜೊಯಿಡಾದಲ್ಲಿ ತಲಾ 1, ಕುಮಟಾದಲ್ಲಿ 32, ಹೊನ್ನಾವರದಲ್ಲಿ 14, ಭಟ್ಕಳದಲ್ಲಿ 10, ಶಿರಸಿಯಲ್ಲಿ 8, ಸಿದ್ದಾಪುರದಲ್ಲಿ 14, ಯಲ್ಲಾಪುರದಲ್ಲಿ 2, ಮುಂಡಗೋಡಿನಲ್ಲಿ 3, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 22 ಜನರು ಕೋವಿಡ್ ಮುಕ್ತರಾಗಿ ಗುಣ ಹೊಂದಿದ್ದಾರೆ. ಒಟ್ಟಾರೆ ಸೋಂಕಿನಿಂದ ಗುಣ ಹೊಂದಿದವರ ಸಂಖ್ಯೆ 3197ಕ್ಕೇರಿದೆ. 939 ಸಕ್ರಿಯ ಪ್ರಕರಣಗಳಿವೆ.

ಕ್ಷಯ ರೋಗದಿಂದ ಬಳಲುತ್ತಿದ್ದ ಕಾರವಾರದ 51 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಭಟ್ಕಳದಲ್ಲಿ 1, ಹಳಿಯಾಳದಲ್ಲಿ 1 ಸೇರಿ ಮಂಗಳವಾರ ಒಟ್ಟು ಮೂವರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಇದುವರೆಗೆ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 44ಕ್ಕೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net