ಸ್ವಯಂಚಾಲಿತ ಸ್ಯಾನಿಟರಿ ಪ್ಯಾಡ್ ವಿತರಣೆ ಯಂತ್ರ

9KWR2
Published on

ಕಾರವಾರ: ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಪರಿಸರ ಸ್ನೇಹಿ ಸ್ವಯಂಚಾಲಿತ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರ ಹಾಗೂ ಬಳಕೆ ಮಾಡಿದ ಪ್ಯಾಡ್​ಗಳ ದಹನ ಯಂತ್ರವನ್ನು ಅಳವಡಿಸಿದೆ.

ಬಂಡಲವು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಯಂತ್ರವನ್ನು ಅಳವಡಿಸಿದ ಮೊದಲ ಗ್ರಾಮ ಪಂಚಾಯಿತಿ ಎನಿಸಿಕೊಂಡಿದೆ. ಸ್ಯಾನಿಟರಿ ಪ್ಯಾಡ್ ಯಂತ್ರವು ಒಮ್ಮೆಲೆ 150 ಪ್ಯಾಡ್​ಗಳನ್ನು ಶೇಖರಿಸುವ ಸಾಮರ್ಥ್ಯ ಹೊಂದಿದೆ. 5 ರೂಪಾಯಿ ನಾಣ್ಯ ಹಾಕಿದಲ್ಲಿ ಒಂದು ಪ್ಯಾಡ್ ಸಿಗಲಿದೆ. ಈ ಯಂತ್ರದ ನಿರ್ವಹಣೆಯನ್ನು ಶಾಲೆ, ಅಂಗನವಾಡಿ ಶಿಕ್ಷಕಿಯರು, ಅಥವಾ ಸ್ತ್ರೀ ಶಕ್ತಿ ಸಂಘಕ್ಕೆ ವಹಿಸಲು ಗ್ರಾಪಂ ಯೋಜಿಸಿದೆ.

ಇನ್ನು ಸ್ಯಾನಿಟರಿ ಪ್ಯಾಡ್​ಗಳನ್ನು ಬೇಕಾಬಿಟ್ಟಿ ಎಸೆದಲ್ಲಿ ಅದು ಪರಿಸರಕ್ಕೆ ಮಾರಕವಾಗಲಿದೆ. ಇದರಿಂದ ಅದನ್ನು 1200 ಡಿಗ್ರಿ ಉಷ್ಣಾಂಶದಲ್ಲಿ ವೈಜ್ಞಾನಿಕವಾಗಿ ದಹನ ಮಾಡುವ ಯಂತ್ರವನ್ನು ಅಳವಡಿಸಲಾಗಿದೆ. ಪ್ಯಾಡ್ ಹಾಕಿ ಒಂದು ಬಟನ್ ಒತ್ತಿದಲ್ಲಿ ಅದು ದಹನವಾಗಲಿದೆ.

ಸ್ವಚ್ಛ ಭಾರತ ಮಿಷನ್ ಅಡಿ ಋತುಚಕ್ರ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವೂ ಇದೆ. ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಮಾಸಿಕ ಋತು ಚಕ್ರದ ಸಂದರ್ಭದಲ್ಲಿ ಸ್ವಚ್ಛತೆಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕಿದೆ. ಆ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್​ಗಳನ್ನು ಉಪಯೋಗಿಸಬೇಕು ಮತ್ತು ಅದನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಕ್ರಮ ವಹಿಸಲಾಗುತ್ತಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net