ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರು ಜಾಗೃತರಾಗಬೇಕು

IMG_20230520_111118
Published on

ಹೊಳೆನರಸೀಪುರ: ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಾಗರಿಕರು ಜಾಗೃತರಾಗಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.


ಪಟ್ಟಣದ ಮಹಾತ್ಮ ಗಾಂಧಿ ಪಾರ್ಕ್ ಆವರಣದಲ್ಲಿ ಪುರಸಭೆ ಕಾರ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಆರ್‌ಆರ್‌ಆರ್ (ರೆಡ್ಯೂಸ್, ರಿಯೂಸ್, ರಿ ಸೈಕಲ್)ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ಶುಚಿತ್ವದಲ್ಲಿ ಕಾಪಾಡಲು ಸಾರ್ವಜನಿಕ ಪಾತ್ರ ಬಹುಮುಖ್ಯವಾಗಿರುತ್ತದೆ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಬಾರದು. ನಿಗದಿತ ಸ್ಥಳದಲ್ಲಿ ಹಾಕಬೇಕು. ತ್ಯಾಜ್ಯವನ್ನು ರಸ್ತೆ, ಬೀದಿ ಬದಿಗಳಲ್ಲಿ ಬಿಸಾಡುವುದರಿಂದ ಅನೈರ್ಮಲ್ಯಕ್ಕೆ ಕಾರಣವಾಗುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದರು.


ಕಟ್ಟಡಗಳು, ಮನೆಗಳ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ಟ್ಯಾಕ್ಟರ್ ಮೂಲಕ ಸಾಗಿಸಬೇಕು. ನಿಯಮ ಮೀರಿ ತ್ಯಾಜ್ಯ ಸಾಮಗ್ರಿಗಳನ್ನು ಬೇಕಾದ ಸ್ಥಳದಲ್ಲಿ ವಿಲೇವಾರಿ ಮಾಡಿದರೆ ಅಂತಹ ವ್ಯಕ್ತಿ, ಮನೆ ಮಾಲೀಕ ಹಾಗೂ ವಾಹನದ ಮೇಲೆ ಶಿಸ್ತು ಕ್ರಮ ಜರುಗಿಸಿ, ದಂಡ ವಸೂಲಿ ಮಾಡಬೇಕು. ಪಟ್ಟಣವನ್ನು ಸುಂದರವಾಗಿ ಇಟ್ಟುಕೊಳ್ಳುವ ಹೊಣೆ ಪುರಸಭೆ ಕಾರ್ಯಾಲಯಕ್ಕೆ ಇದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.


ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಮಾತನಾಡಿ, ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಹೌಸಿಂಗ್ ಬೋಡ್‌ನಲ್ಲಿರುವ ಪ್ರಜ್ವಲ್ ಉದ್ಯಾನವನದಲ್ಲಿ ರೆಡ್ಯೂಸ್, ರಿಯೂಸ್, ರಿ ಸೈಕಲ್ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಮಕ್ಕಳ ಅಟಿಕೆ ಸಾಮಾನುಗಳು, ಹಳೆಯ ಪುಸ್ತಕಗಳು, ಹಳೆಯ ದಿನಪತ್ರಿಕೆಗಳು, ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಲ್ಲಿಗೆ ತಲುಪಿಸಬೇಕು ಎಂದು ಮನವಿ ಮಾಡಿದ ಅವರು, ಸಾರ್ವಜನಿಕರು ತಂದುಕೊಡುವ ಈ ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಳ್ಳುವ ಕಸುಬುದಾರರಿಗೆ ತಲುಪಿಸಲಾಗುತ್ತದೆ. ಇದರಿಂದ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬಹುದು ಎಂದು ಹೇಳಿದರು.


ಪುರಸಭೆ ಸದಸ್ಯರಾದ ಶ್ರೀಧರ್, ಜಗನ್ನಾಥ್, ರೋಟರಿ ಸಂಸ್ಥೆಯ ಅಧ್ಯಕ್ಷ ರೇಣುಕೇಶ್, ಕಸಾಪ ಅಧ್ಯಕ್ಷ ಬಿ.ಆರ್.ಪುಟ್ಟಿಗೌಡ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಯೋಗೇಶ್, ಪುರಸಭೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net