ಸ್ಯಾಟಲೈಟ್ ಟೌನ್‌ಗೆ ಕೇಂದ್ರದಿಂದ ಅನುದಾನ

kkkkkk
Published on

ಕನಕಪುರ: ಬೆಂಗಳೂರು ಸುತ್ತಲಿನ 5 ಸ್ಯಾಟಲೈಟ್ ಟೌನ್‌ಗಳಿಗೆ ಭೂ ಸ್ವಾಧೀನಕ್ಕಾಗಿ ಶೇ.70 ಅನುದಾನ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದು, ಉಳಿದ ಶೇ.30 ಅನುದಾನ ರಾಜ್ಯ ಸರ್ಕಾರ ನೀಡಬೇಕಿದೆ. ಆದರೆ, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲೂಕಿನ ಜವನಮ್ಮನದೊಡ್ಡಿ ಸಮೀಪದ ನಾರಾಯಣಗೌಡರ ತೋಟದ ಬಳಿ ಗುರುವಾರ ಹಮ್ಮಿಕೊಂಡಿದ್ದ ಸಂಸದರ ನೂತನ ಕಚೇರಿ ಉದ್ಘಾಟನೆ ಹಾಗೂ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಐದು ಸ್ಯಾಟಲೈಟ್ ಟೌನ್‌ಗಳ ಅಭಿವೃದ್ಧಿಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಯೋಜನೆಯನ್ನು 45 ದಿನಗಳೊಳಗೆ ಸಾಕಾರಗೊಳಿಸಲು ಹಣ ಮಂಜೂರು ಮಾಡಿದ್ದು, ಕೇಂದ್ರದಿಂದ 1400 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 630 ಕೋಟಿ ರೂ. ಅವಶ್ಯ ಇದೆ ಎಂದರು.

ಮತ್ತೊಬ್ಬರಿಗೆ ತೊಂದರೆ ನೀಡದೆ ಬದುಕು ಸಾಗಿಸುವುದವೇ ನಿಜವಾದ ಸ್ವಾತಂತ್ರ್ಯ. ನಗರ ಹಾಗೂ ಗ್ರಾಮೀಣ ಭಾಗದ ಮೂಲ ಸಮಸ್ಯೆಗೆ ಪರಿಹಾರ ಒದಗಿಸುವುದೇ ನನ್ನ ಮೊದಲ ಧ್ಯೇಯವಾಗಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ತಡೆಬೇಲಿ ನಿರ್ಮಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ರೈಲುಕಂಬಿಗಳನ್ನು ಕಡಿಮೆ ದರದಲ್ಲಿ ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಾಡಾನೆ ದಾಳಿಯಿಂದ ಶಾಶ್ವತ ಪರಿಹಾರಕ್ಕೆ ಸಾಧ್ಯವಾಗುತ್ತದೆ ಎಂದರು.

ಸ್ವಾತಂತ್ರ್ಯಪೂರ್ವದಲ್ಲಿ ಸಾವಿರಾರು ಮಂದಿಯ ತ್ಯಾಗ, ಬಲಿದಾನ ಹಾಗೂ ಹೋರಾಟ ಮಾಡಿದವರನ್ನು ಇಂದಿನ ಯುವಜನತೆಗೆ ಪರಿಚಯಿಸುವುದೇ ಸ್ವಾತಂತ್ರ್ಯೋತ್ಸವದ ಮುಖ್ಯ ಉದ್ದೇಶ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಸಿದ್ದಮರಿಗೌಡ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಮುಖಂಡರಾದ ಎನ್.ಎಸ್.ಶಿವಕುಮಾರ್, ತಿಮ್ಮೇಗೌಡ, ರಾಜಗೋಪಾಲ್, ನೀಲಮ್ಮ, ಬಿಜೆಪಿ ತಾಲೂಕು ಗ್ರಾಮಾಂತರ ಅಧ್ಯಕ್ಷ ಕೆ.ಪಿ.ಕುಮಾರ್, ಉಪಾಧ್ಯಕ್ಷ ಸೀರೆಗೌಡ, ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥ್, ಆಡನಕುಪ್ಪೆ ಪಾಲಾಕ್ಷ, ನಗರ ಘಟಕದ ಮಾಜಿ ಅಧ್ಯಕ್ಷ ಮುತ್ತಣ್ಣ, ಯುವಮೋರ್ಚಾ ಅಧ್ಯಕ್ಷ ತಿಮ್ಮಪ್ಪ ಸೇರಿ ಮುಖಂಡರು, ಗ್ರಾಮಸ್ಥರು ಇದ್ದರು.

ಕೇಂದ್ರ ಸಚಿವರಿಂದ ಸ್ಪಂದನೆ : ತಾಲೂಕಿನ ವಿವಿಧ ಇಲಾಖೆಗಳಲ್ಲಿ ಬಹಳಷ್ಟು ನ್ಯೂನತೆಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಕೆರೆಗಳ ಪುನಃಶ್ಚೇತನಕ್ಕೆ ಒತ್ತು ನೀಡಬೇಕಿದೆ. ಗಡಿ ಭಾಗಗಳಲ್ಲಿ ಕಾಡಾನೆಗಳಿಂದ ಸಾವು-ನೋವು ಹಾಗೂ ಬೆಳೆನಾಶದ ಪ್ರಕರಣಗಳು ಕಣ್ಣಮುಂದಿವೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ನಾನು, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ರೈಲ್ವೆ ಸಚಿವರೊಂದಿಗೆ ಚರ್ಚಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದು ಸಂಸದರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net