ಸ್ಮಶಾನ ಅಭಿವೃದ್ಧಿ ಕಾಮಗಾರಿ ಸ್ಥಗಿತ

25KMT2
Published on

ಕುಮಟಾ: ತಾಲೂಕಿನ ಮೂರೂರು ಹಣ್ಣೆಕೇರಿಯಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸ್ಥಳೀಯರ ಪ್ರಕಾರ, ಸ್ಮಶಾನ ಕಾಮಗಾರಿ ನಡೆಯುವ ಪ್ರದೇಶವು ಜನವಸತಿ ಪ್ರದೇಶಕ್ಕೆ ತೀರಾ ಸನಿಹದಲ್ಲಿದೆ. ಶಾಲಾ ಮಕ್ಕಳು ಓಡಾಡುವ ಸ್ಥಳವೂ ಇದಾಗಿದೆ. ಸಾಮಾನ್ಯವಾಗಿ ಸ್ಮಶಾನ ಎಂದ ಕೂಡಲೆ ಜನರಲ್ಲಿ ಭಯದ ಭಾವನೆ ಇರುವುದರಿಂದ ಬೇರೆ ಸ್ಥಳದಲ್ಲಿ ಕಾಮಗಾರಿ ನಡೆಯಲಿ ಎನ್ನುತ್ತಾರೆ ಸ್ಥಳೀಯರು.

ಹಳೆಯ ಕಾಲದಿಂದಲೂ ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು ಎಂಬುದು ಸುಳ್ಳಲ್ಲ, ಆದರೆ, ಆ ಕಾಲದಲ್ಲಿ ಮನೆಗಳಿಂದ ಸ್ಮಶಾನ ದೂರ ಇತ್ತು. ಈಗ ಅಗತ್ಯಕ್ಕೆ ತಕ್ಕಂತೆ ಮನೆಗಳ ಸಂಖ್ಯೆ ಹೆಚ್ಚಾಗಿದೆ. ಈಗ ಸುಸಜ್ಜಿತ ಸ್ಮಶಾನ ನಿರ್ವಣವಾದರೆ ಶವಸಂಸ್ಕಾರಕ್ಕೆ ಅದೊಂದೇ ಸ್ಥಳ ಕಾಯಂ ಆಗಿ ಬಿಡುತ್ತದೆ. ಹೀಗಾಗಿ ಬೇರೆಡೆ ಸ್ಥಳಾಂತರಿಸಿ ಎನ್ನುತ್ತಿದ್ದಾರೆ.

ಆದರೆ, ಕಾಮಗಾರಿ ಪರವಾಗಿರುವ ಜನರು, ಇಲ್ಲಿ ಜನವಸತಿ ಆರಂಭಗೊಳ್ಳುವ ಮೊದಲಿನಿಂದಲೂ ಸ್ಮಶಾನ ಇದೆ. ಹೊಸದಾಗಿ ನಿರ್ವಿುಸುತ್ತಿಲ್ಲ. ಇರುವ ಮನೆಗಳು ಸ್ಮಶಾನ ನಿರ್ಮಾಣ ಸ್ಥಳದಿಂದ 200 ಮೀಟರಿಗಿಂತ ಹೆಚ್ಚು ದೂರದಲ್ಲಿವೆ. ಇರುವ ಸ್ಮಶಾನವನ್ನೇ ಸುಸಜ್ಜಿತವಾಗಿ ಅಭಿವೃದ್ಧಿಪಡಿಸುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ತಾಪಂ ಇಒ ಸಿ.ಟಿ. ನಾಯ್ಕ, ಬೇರೆ ಅಭಿವೃದ್ಧಿ ಕಾಮಗಾರಿಗಳಿಗೂ, ಸ್ಮಶಾನ ಕಾಮಗಾರಿಗೂ ವ್ಯತ್ಯಾಸವಿದೆ. ಜನರ ಭಾವನೆಗಳನ್ನು ಧಿಕ್ಕರಿಸಿ ಕಾಮಗಾರಿ ಮಾಡಲಾಗದು. ಕೆಲವರು ಅದೇ ಸ್ಥಳದಲ್ಲಿ ಕಾಮಗಾರಿ ಮಾಡುವಂತೆ ಹೇಳಿದ್ದಾರೆ. ಕೆಲವರು ವಿರೋಧಿಸುತ್ತಿದ್ದಾರೆ. ಹೀಗಾಗಿ ಲಾಕ್​ಡೌನ್ ಬಳಿಕ ಎರಡೂ ಕಡೆಯವರನ್ನು ಒಂದೆಡೆ ಸಭೆ ಸೇರಿಸಿ ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net