

ಗೋಣಿಕೊಪ್ಪ: ಕೊಡಗು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕೋತೂರು ಆಶ್ರಮ ಶಾಲೆಯಲ್ಲಿ ಬೊಮ್ಮಾಡು ಹಾಡಿ ನಿವಾಸಿಗಳು ಹಾಗೂ ಕೋತೂರು ವಾಲ್ಮೀಕಿ ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು
ಗ್ರಾಮೀಣ ಅಧ್ಯಯನ ಶಿಬಿರದ ಮೂರನೇ ದಿನವಾದ ಶುಕ್ರವಾರ ಆರೋಗ್ಯ ತಪಾಸಣೆ ನಡೆಸುವುದರೊಂದಿಗೆ ವೈಯಕ್ತಿಯ ಸ್ವಚ್ಛತೆ ಮತ್ತು ಉತ್ತಮ ಪರಿಸರ ಕುರಿತು ಜಾಗೃತಿ ಮೂಡಿಸಲಾಯಿತು.
ಡಾ.ಅರ್ಚನಾ ಮಾತನಾಡಿ, ಆದಿವಾಸಿ ಸಮುದಾಯದಲ್ಲಿ ರಕ್ತಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಅವರ ಆರ್ಥಿಕ ಸ್ಥಿತಿಗೆ ಸ್ಥಳೀಯವಾಗಿ ಲಭ್ಯವಿರುವ ಹಣ್ಣು, ತರಕಾರಿ, ಸೊಪ್ಪುಗಳನ್ನು ನಿತ್ಯ ಆಹಾರದಲ್ಲಿ ಸೇವಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸುರಕ್ಷಣಾಧಿಕಾರಿ ಕಾವೇರಮ್ಮ ಮಾತನಾಡಿ, ಶಿಶು ಮರಣ ದರ ಹಾಗೂ ಮಾತೃ ಮರಣ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳು ಹಾಡಿಯ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ವಿ.ಎಸ್.ಪ್ರಶಾಂತ್‌ಕುಮಾರ್, ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕಾಂತ್, ಉಪನ್ಯಾಸಕರಾದ ಲೋಕೇಶ್ ಭರಣಿ, ನಟರಾಜ, ಕೆ.ಹರಿಣಾಕ್ಷಿ, ಕೆ.ಜೆ.ರಾಬಿನ್, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.