ಸೌಹಾರ್ದ, ಶಾಂತಿಯಿಂದ ಹಬ್ಬ ಆಚರಿಸಿ

DC Meet
Published on

ಕಲಬುರಗಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿದ್ದು, ಜಿಲ್ಲಾದ್ಯಂತ ಎಲ್ಲ ಸಮುದಾಯದವರು ಪರಸ್ಪರ ಶಾಂತಿ, ಸೌಹಾರ್ದದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಂತಿ ಸಮಿತಿ ಸಭೆ ನಡೆಸಿದ ಅವರು, ಸೆ.೭ರಂದು ಗಣೇಶ ಪ್ರತಿಷ್ಠಾಪನೆಯಾಗಿ ನಿರಂತರ ೧೧ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೧೬ರಂದು ಈದ್ ಮಿಲಾದ್ ಇದ್ದು, ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಜನತೆ ಸಹೋದರತ್ವದಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಕೋರಿದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಮಾತನಾಡಿ, ನಗರದೆಲ್ಲೆಡೆ ಸುಮಾರು ೬೦೦ ಗಣೇಶ ಪ್ರತಿಷ್ಠಾಪನೆ ಮಾಡಲಿದ್ದು, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲು ಅಸಾಧ್ಯ. ಆದರೆ ಪ್ರತಿ ಪೆಂಡಾಲ್‌ಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಸಿಬ್ಬಂದಿ ಎರಡ್ಮೂರು ಗಂಟೆಗೊಮ್ಮೆ ಭೇಟಿ ನೀಡಲಿದ್ದಾರೆ. ಕೋಮು ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕಲಬುರಗಿ. ಯಾವ ಕಾರಣಕ್ಕೂ ಸಾರ್ವಜನಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಏನೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಮಾಜದ ಸಾಮರಸ್ಯ ಹಾಳು ಮಾಡಲು ಸಾಮಾಜಿಕ ಜಾಲತಾಣ ಮೂಲಕ ಸುಳ್ಳು ಸುದ್ದಿ ಹರಡುವ ಸಾಧ್ಯತೆ ಇದೆ. ಸಾರ್ವಜನಿಕರು ಫಾರ್ವಡ್ ಮಾಡುವ ಮುನ್ನ ಸತ್ಯಾಸತ್ಯತೆ ಅರಿಯಬೇಕು. ರಾತ್ರಿ ವೇಳೆ ಗಣೇಶ ಪೆಂಡಾಲ್ ಬಳಿ ಆಯೋಜಕರು ಸ್ವಯಂ ಸೇವಕರನ್ನು ನಿಯೋಜಿಸಬೇಕು. ಪೊಲೀಸರು ರಾತ್ರಿ ಪೆಟ್ರೋಲಿಂಗ್ ಮಾಡುತ್ತಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾತ್ರಿ ೧೦ರ ನಂತರ ಧ್ವನಿವರ್ಧಕ ಬಳಸಬಾರದು. ಮೆರವಣಿಗೆ ವೇಳೆ ಜನಸಮೂಹ ನಿಯಂತ್ರಣಕ್ಕೆ ಸ್ವಯಂ ಸೇವಕರ ಪಟ್ಟಿ ನೀಡಿದಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಮಾತನಾಡಿ, ಪಿಒಪಿ ಗಣಪ ಪ್ರತಿಷ್ಠಾಪನೆಗೆ ನಿಷೇಧವಿದೆ. ರಾಸಾಯನಿಕ ಬಣ್ಣವಿಲ್ಲದ ಮಣ್ಣಿನ ಗಣಪ ಪ್ರತಿಷ್ಠಾಪಿಸಿ ಜಲಮಾಲಿನ್ಯ ಆಗದಂತೆ ವಿಸರ್ಜನೆ ಮೂಲಕ ಈ ವರ್ಷ ಪರಿಸರಸ್ನೇಹಿ ಗಣೇಶ ಹಬ್ಬ ಅಚರಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.
ನಗರ ವ್ಯಾಪ್ತಿಯ ವಾರ್ಡ್ವಾರು ಸಣ್ಣ ಮತ್ತು ಮನೆಯಲ್ಲಿನ ಗಣಪಗಳ ವಿಸರ್ಜನೆಗೆ ಪಾಲಿಕೆಯಿಂದ ಅಲ್ಲಲ್ಲಿ ಟ್ರಾÈಕ್ಟರ್‌ನಲ್ಲಿ ಟಾರ್ಪಲಿನ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಶರಣಬಸವೇಶ್ವರ ಕೆರೆ ಆವರಣದಲ್ಲಿ ಒಂದೆಡೆ ದೊಡ್ಡ ಗಣಪನ ವಿಸರ್ಜನೆಗೆ ಅನುವು ಮಾಡಿಕೊಡಲಾಗುವುದು. ಕೆರೆ ಸುತ್ತ ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಮಾಜದ ಮುಖಂಡ ಬಾಬುರಾವ ಜಹಾಗಿರದಾರ್ ಮಾತನಾಡಿ, ಸೆ.೭ರಂದು ಗಣೇಶನನ್ನು ಜಿಲ್ಲಾದ್ಯಂತ ಪ್ರತಿಷ್ಠಾಪಿಸಿ ಐದು, ಏಳು ಹಾಗೂ ೧೧ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ಪೆಂಡಾಲ್‌ಗೆ ವಿದ್ಯುತ್ ನಿರಂತರ ಪೂರೈಕೆಯಾಗಬೇಕು. ಮೆರವಣಿಗೆ ವೇಳೆ ಅವಘಡವಾಗದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಪ್ರತಿದಿನ ರಾತ್ರಿ ವಿದ್ಯುತ್ ಅವಘಡ ತಪ್ಪಿಸಲು ಮತ್ತು ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ವಾಹನದೊಂದಿಗೆ ತಂಡ ನಿಯೋಜಿಸಬೇಕು ಎಂದು ಕೋರಿದರು.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಕೆಕೆಆರ್‌ಟಿಸಿ ಎಂಡಿ ಎಂ.ರಾಚಪ್ಪ, ಅಪರ ಡಿಸಿ ರಾಯಪ್ಪ ಹುಣಸಗಿ, ಎಸಿ ರೂಪಿಂದರ್‌ಸಿAಗ್ ಕೌರ್, ಎಸಿಪಿ ಬಿಂದುರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net