

ಬಾಗಲಕೋಟೆ: ವಿವಿಧ ಇಲಾಖೆಯಡಿ ಸಾರ್ವಜನಿಕರಿಗೆ ದೊರೆಯಬಹುದಾದ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು.
ತಾಲೂಕಿನ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಗೌರಿ ಶಂಕರ ಸಮುದಾಯ ಭವನದಲ್ಲಿ ಭಾನುವಾರ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಆರೋಗ್ಯ, ಪೊಲೀಸ್, ಬ್ಯಾಂಕ್ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಹಾಗೂ ನಮಗೂ ಹಕ್ಕು ಇದೆ ೭೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದು, ವಿವಿಧ ಇಲಾಖೆಯವರು ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಒದಗಿಸುವ ಕಾರ್ಯವಾಗಬೇಕು. ಮಾಹಿತಿ ಕೊರತೆಯಿಂದಾಗಿ ಪದೇ ಪದೇ ಕಚೇರಿಗೆ ಅಲೆದಾಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಽಕಾರಿಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ತಮ್ಮ ಇಲಾಖೆಯಲ್ಲಿ ದೊರೆಯಬಹುದಾದ ಸೌಲಭ್ಯಗಳ ಮಾಹಿತಿ, ಆಧಾರ ತಿದ್ದುಪಡಿ, ಸರ್ವೇ ಕಾರ್ಯ, ಹಕ್ಕು ಬಿಡುಗಡೆ ಸೇರಿದಂತೆ ಇತರೆ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಟಿ.ಭೂಬಾಲನ್ ಮಾತನಾಡಿ, ಬಡವರಿಗೂ ಸಮಾನವಾದ ನ್ಯಾಯ ದೊರೆಯಲಿ ಎಂಬ ಉದ್ದೇಶದಿಂದ ಉಚಿತ ಕಾನೂನು ಸೇವೆ ನೀಡಲು ಕಾನೂನು ಸೇವಾ ಪ್ರಾಧಿಕಾರ ರಚನೆ ಮಾಡಿದ್ದು, ಸೇವೆಗಳನ್ನು ಪಡೆಯುವಲ್ಲಿ ವಿಳಂಬವಾದಲ್ಲಿ ಪ್ರಶ್ನೆ ಮಾಡುವಂತಾಗಬೇಕಾದರೆ ಕಾನೂನಿನ ಅರಿವು ಮುಖ್ಯವಾಗಿದೆ. ನಾಗರಿಕರ ಸಬಲೀಕರಣಕ್ಕಾಗಿಯೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಅನ್ಯಾಯವಾದಲ್ಲಿ ಕಾನೂನಿ ಮೊರೆ ಹೋಗಲು ಅರಿವು ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಸರ್ವರಿಗೂ ನ್ಯಾಯ ಒದಗಿಸುವದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಕಾನೂನು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಇದರ ಮೂಲಕ ಸಮಾನ ಹಕ್ಕು ದೊರಕಿಸಿ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಹೊರತಂದ ವಿವಿಧ ಯೋಜನೆಯ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ಪ್ರಾದೇಶಿಕ ಸಾರಿಗೆ ಅಧೀಕ್ಷಕ ಉಮೇಶ ಗಂಗನಹಳ್ಳಿ, ತಹಸೀಲ್ದಾರ ವಿನಯ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಾಯಿರಾಬಾನು ನದಾಫ್, ಸಿಡಿಪಿಒ ಶಿಲ್ಪಾ ಹಿರೇಮಠ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇಲಾಖೆಯ ವಿವಿಧ ಸೇವೆಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೀರಲಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಾಪೂರ, ವಕೀಲರ ಸಂಘದ ಕಾರ್ಯದರ್ಶಿ ಶ್ರೀಶೈಲ ಹಾವರಗಿ, ತಾ.ಪಂ ಇಒ ಶಿವಾನಂದ ಕಲ್ಲಾಪುರ, ಮುಚಖಂಡಿ ದೇವಸ್ಥಾನದ ದರ್ಮದರ್ಶಿ ಪ್ರಭು ಸರಗಣಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.