ಸೋಲಿನಿಂದ ಎದೆಗುಂದುವ ಅಗತ್ಯವಿಲ್ಲ

IMG-20230515-WA0117
Published on

ಅರಸೀಕೆರೆ: ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ ನಮ್ಮ ಪ್ರತಿಸ್ಪರ್ಧಿಗೆ ಎಷ್ಟು ಹತ್ತಿರದಲ್ಲಿ ಇದ್ದೇವೆ ಅನ್ನೋದು ಮುಖ್ಯ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಹೇಳಿದರು.


ನಗರದ ದೇವನೂರು ರಸ್ತೆಯಲ್ಲಿರುವ ಅಂಜನಾದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಹತ್ತಿರದಿಂದ ಸೋತಿದ್ದೀವಿ ಅನ್ನುವುದಕ್ಕಿಂತ ಗೆಲ್ಲುವ ಹಂತದಲ್ಲಿದ್ದೇವೆ ಎಂಬ ವಿಚಾರ ನಮ್ಮ ಎದುರಾಳಿಗೆ ಬಹಳ ಸ್ಪಷ್ಟವಾಗಿ ಮುಟ್ಟಿದೆ ಎಂದರು.


ನಾನು ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ. ಹಿಂದಿರುಗಿ ಹೋಗುವ ವ್ಯಕ್ತಿ ನಾನಲ್ಲ. ನಿಮ್ಮಗಳ ಸಹಕಾರಕ್ಕೆ ಕೃತಜ್ಞತೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಎದೆಗುಂದದೆ ಪ್ರತಿ ಬೂತ್‌ನಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಆಗಿರುವ ತೊಂದರೆಗಳನ್ನು ಸರಿಪಡಿಸಿ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.


ಇನ್ನು ಮುಂದೆ ನಮ್ಮ ಕೆಲಸ ಜನರ ಕಷ್ಟಗಳಿಗೆ ಸ್ಪಂದಿಸುವುದು. ನಮ್ಮ ಸಂಘಟನೆ ಏನು ಎಂದು ಈಗಾಗಲೇ ನಮ್ಮ ಎದುರಾಳಿಗೆ ಗೊತ್ತಾಗಿದೆ. ಎರಡು ವರ್ಷದಲ್ಲಿ 77 ಸಾವಿರ ಮತ ಪಡೆಯಲಾಗಿದ್ದು, ನಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಆದ್ದರಿಂದ ಯಾರೂ ಕೂಡ ಧೃತಿಗೆಡದೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಸಭೆಯಲ್ಲಿ ಪಕ್ಷದ ಮುಖಂಡರಾದ ಡಾ.ರವಿ, ಭೋಜನಾಯಕ್, ನಾಗಸಮುದ್ರ ಮಂಜು, ಶಾನೆಗೆರೆ ಮಂಜು, ದೀಪು, ಜಯರಾಮ್, ಬಾಣವಾರ ಧರಣಿ. ಮಧು. ನಂಜುಂಡಸ್ವಾಮಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net