ಸೋಲಿಗೆ ಧೃತಿಗೆಟ್ಟು ಮನೆಯಲ್ಲಿ ಕೂರಲ್ಲ

18ark1
ಅರಕಲಗೂಡಿನಲ್ಲಿ ಮಂಗಳವಾರ ಎಂ.ಟಿ.ಕೃಷ್ಣೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ಕಸಬಾ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಗಳ ಸಮಾಲೋಚನಾ ಸಭೆಯನ್ನು ಜಿಪಂ ಮಾಜಿ ಸದಸ್ಯ ಎ.ಡಿ.ಚಂದ್ರಶೇಖರ್ ಉದ್ಘಾಟಿಸಿದರು. ಎಂ.ಟಿ. ಕೃಷ್ಣೇಗೌಡ, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ, ಲೋಕೇಶ್, ಪರಮೇಶ್, ರಾಮೇಗೌಡ, ದ್ಯಾವಯ್ಯ ಇತರರಿದ್ದರು.
Published on

ಅರಕಲಗೂಡು: ವಿಧಾನಸಭಾ ಚುನಾವಣೆ ಸೋಲಿಗೆ ಧೃತಿಗೆಟ್ಟು ಮನೆಯಲ್ಲಿ ಕೂರದೆ ಜನರೊಂದಿಗಿದ್ದು, ಸಂಘಟನೆ ಬಲಪಡಿಸುವೆ. ವಿರೋಧಿಗಳ ಕುಹುಕ ಮಾತಿಗೆ ತಲೆಕೆಡಿಸಿಕೊಳ್ಳದೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸಲಿದ್ದು, ಕಾರ್ಯಕರ್ತರು ಬೆಂಬಲಿಗರು ಸಹಕರಿಸಬೇಕು ಪರಾಜಿತ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಮನವಿ ಮಾಡಿದರು.

ಪಟ್ಟಣದ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಎಂ.ಟಿ.ಕೃಷ್ಣೇಗೌಡ ಅಭಿಮಾನಿ ಬಳಗ ಮಂಗಳವಾರ ಆಯೋಜಿಸಿದ್ದ ಕಸಬಾ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಾನು 4 ವರ್ಷದಿಂದ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಪಕ್ಷ ಕಟ್ಟಿದೆ. ಬೇರೆಯವರಂತೆ ಚುನಾವಣೆ 3 ತಿಂಗಳು ಇರುವಂತೆ ಪಕ್ಷಕ್ಕೆ ಬರಲಿಲ್ಲ. ನಾನು ಪ್ರಾಮಾಣಿಕವಾಗಿ ಪಕ್ಷ ಕಟ್ಟಿದೆ. ಆದರೆ ಕಾಂಗ್ರೆಸ್ ನನಗೆ ಟಿಕೆಟ್ ನೀಡದೆ ವಂಚಿಸಿತು. ಪಕ್ಷೇತರವಾಗಿ ಸ್ಪರ್ಧಿಸಿದೆ. ಈ ವೇಳೆ ಪಕ್ಷದಲ್ಲಿದ್ದ ನಿಷ್ಠಾವಂತ ಮುಖಂಡರು ನನಗೆ ಸಹಕಾರ ನೀಡಿದರು. ಆದರೆ ಅವರಿಗೆ ಕೆಪಿಸಿಸಿಯಿಂದ ಉಚ್ಚಾಟನಾ ಪತ್ರ ಕಳಹಿಸುತ್ತಾರೆಂದರೆ ಕಾಂಗ್ರೆಸ್ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಯೋಚಿಸುವ ಪರಿಸ್ಥಿತಿ ಇದೆ ಎಂದು ಹೇಳಿದರು.

ತಾಲೂಕನ್ನು ಅಭಿವೃದ್ಧಿ ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇನೆಯೇ ವಿನಹ ಬೇರೆ ಉದ್ದೇಶವಿಲ್ಲ. ಗೊರೂರು ಹೇಮಾವತಿ ಜಲಾಶಯವಿದ್ದರೂ ಸಮರ್ಪಕ ನೀರಾವರಿ ಸೌಲಭ್ಯವಿಲ್ಲ. ಈ ವೇಳೆಗಾಗಲೇ ತಾಲೂಕಲ್ಲಿ ನಾಲ್ಕೈದು ಏತನೀರಾವರಿ ಸ್ಥಾಪಿಸಿ ಎಲ್ಲ ಕೆರೆಕಟ್ಟೆಗಳಿಗೆ ನೀರು ಒದಗಿಸಬೇಕಿತ್ತು. ಆ ಕೆಲಸವಾಗಿಲ್ಲ. ಮುಂದಿನ ದಿನದಲ್ಲಿ ತಾಲೂಕು ಅಭಿವೃದ್ಧಿಗೆ ನನ್ನೊಂದಿಗೆ ಕೈ ಜೋಡಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಎ.ಡಿ.ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲೇ ಪಕ್ಷೇತರ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಎಂದರೆ ಕೃಷ್ಣೇಗೌಡರು ಮಾತ್ರ. ಹಾಗಾಗಿ ಸೋಲನ್ನು ಒಪ್ಪಲು ಸಾಧ್ಯವಿಲ್ಲ. ನೈತಿಕವಾಗಿ ಗೆಲುವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೃಷ್ಣೇಗೌಡರು ಕಾರ್ಯಕರ್ತರು, ಮುಖಂಡರನ್ನು ಗಮನದಲ್ಲಿಟ್ಟುಕೊಂಡು ಏನೇ ತೀರ್ಮಾನ ತೆಗೆದುಕೊಂಡರೂ ನಾವೆಲ್ಲ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.

ಮುಖಂಡ ಕಳ್ಳಿಮುದ್ದನಹಳ್ಳಿ ಲೋಕೇಶ್ ಮಾತನಾಡಿ, ಕ್ಷೇತ್ರದ ಮತದಾರರ ಒಲವು ನಮ್ಮ ಪರ ವ್ಯಕ್ತವಾಗಿದ್ದು, ಸ್ವತಃ ಕೃಷ್ಣೇಗೌಡ ಅವರು ಗ್ರಾಪಂ ಮಟ್ಟದಲ್ಲಿ ಸಂಘಟನೆಗೆ ಮತ್ತಷ್ಟು ಶ್ರಮ ವಹಿಸಬೇಕು ಎಂದರು.

ತಾಲೂಕು ವೀರಶೈವ ಮಹಾಸಭಾದ ರವಿಕುಮಾರ್, ಮುಖಂಡರಾದ ಗೇಟ್ ವೆಂಕಟೇಶ್, ದೇವರಾಜೇಗೌಡ, ಬಸವರಾಜು, ಜಮೀರ್, ರಂಗಸ್ವಾಮಿ, ರಾಮೇಗೌಡ, ಪರಮೇಶ್ ಬಸವನಹಳ್ಳಿ, ಪ್ರಸನ್ನ, ನಿಲುವಾಗಿಲು ಕೃಷ್ಣ, ನಿವೃತ್ತ ಶಿಕ್ಷಕ ದ್ಯಾವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net