ಸೋರಿಕೆ ತಡೆದರೆ ಪುರಸಭೆಗೆ ಅಧಿಕ ಆದಾಯ

4-pnp 1a
Published on

ಪಾಂಡವಪುರ: ಪುರಸಭೆ ಆದಾಯ ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಕ್ರಮ ವಹಿಸಿದರೆ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಪಡೆಯಬಹುದು ಎಂದು ಪುರಸಭೆ ಸದಸ್ಯ ಎಚ್.ಎಲ್.ಮುರಳೀಧರ್ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಮಂಡಿಸಲಾದ 2025-26ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು.

ವಾಣಿಜ್ಯ ಮಳಿಗೆ ಮತ್ತು ಇತರ ಕಟ್ಟಡಗಳ ಬಾಡಿಕೆಯಿಂದ ಕೇವಲ 9 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಪುರಸಭೆಗೆ ಸೇರಿದ 82 ಮಳಿಗೆಗಳಿದ್ದು, ಈ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡ ವ್ಯಕ್ತಿಗಳು ತಾವೇ ಅದರ ಮಾಲೀಕರಂತೆ ವರ್ತಿಸುತ್ತಿದ್ದಾರೆ. ಮಳಿಗೆಗಳನ್ನು ವಿಭಾಗಗೊಳಿಸಿ ಸಾವಿರಗಟ್ಟಲೇ ಬಾಡಿಗೆಗೆ ನೀಡಿ ಪುರಸಭೆಗೆ ನೂರರ ಲೆಕ್ಕದಲ್ಲಿ ಬಾಡಿಗೆ ಕೊಡಲಾಗುತ್ತಿದೆ. ಅಧಿಕಾರಿಗಳು ಇದನ್ನು ತಡೆಯಲು ವಿಫಲರಾಗಿದ್ದಾರೆ. ಈ ಬಜೆಟ್ ವಾಸ್ತವಕ್ಕೆ ತದ್ವಿರುದ್ಧವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ ಅಭಿವೃದ್ಧಿ ಶುಲ್ಕ ಮಾತ್ರ ನಿರೀಕ್ಷೆಯಂತಿಲ್ಲ ಎಂದು ಆರೋಪಿಸಿದರು.

ಸದಸ್ಯ ಪಾರ್ಥಸಾರಥಿ ಮಾತನಾಡಿ, ಪುರಸಭೆ ಮಳಿಗೆಗಳನ್ನು ತಮ್ಮ ಸ್ವತಃ ಆಸ್ತಿ ಎಂಬಂತೆ ಲಕ್ಷಾಂತರ ರೂ.ಗಳಿಗೆ ಅಕ್ರಮವಾಗಿ ಪರಭಾರೆ ಮಾಡಲಾಗುತ್ತಿದೆ. ಪುರಸಭೆಗೆ ಸೇರಿದ ಮಳಿಗೆಗಳಿಗೆ ಕ್ರಮ ಸಂಖ್ಯೆ ನೀಡಬೇಕು. ಪುರಸಭೆಗೆ ಸೇರಿದ ಆಸ್ತಿಗಳ ಮೇಲೆ ಖಾಸಗಿ ವ್ಯಕ್ತಿಗಳು ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ ಪುರಸಭೆಗೆ ಹಕ್ಕು ಇಲ್ಲದಂತಾಗಿದೆ. ರಸ್ತೆ ಕಟಿಂಗ್ ಶುಲ್ಕ ಕೇವಲ 5 ಲಕ್ಷ ರೂ. ನಿರೀಕ್ಷಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ರಸ್ತೆ ಅಗೆದು ಗುಂಡಿ ಮಾಡಲಾಗುತ್ತಿದೆ. ಆದರೆ ಆದಾಯ ಇಲ್ಲ ಜತೆಗೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿಲ್ಲ. ಅಮೃತ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಡಾಂಬರೀಕರಣಗೊಂಡಿದ್ದ ರಸ್ತೆಗಳನ್ನು ಅಗೆದು ಹಾಳುಗೆಡವಲಾಗಿದೆ. ಆದರೆ ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಪ್ರಭಾವಿ ವ್ಯಕ್ತಿಗಳು ಐದು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ತಕ್ಕಂತೆ ಕಂದಾಯ ಪಾವತಿಸುತ್ತಿಲ್ಲ. ಆದರೆ, ಬಡವರ ಬಳಿ ಒಂದು ರೂಪಾಯಿ ಬಿಡದೆ ಕಂದಾಯ ವಸೂಲಿ ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯ ಚಂದ್ರು ಮಾತನಾಡಿ, ಹೊಸ ಕಟ್ಟಡ ಕಟ್ಟುವವರಿಗೆ ಕಟ್ಟಡ ಪರವಾನಗಿ ನೀಡಲು ವಿಳಂಬ ಮಾಡುತ್ತಿರುವ ಕಾರಣ ಬಹುತೇಕರು ಪರವಾನಗಿಯನ್ನೇ ಪಡೆಯದೆ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ. ನಂತರದಲ್ಲಿ ಎರಡರಷ್ಟು ಕಂದಾಯ ಸಂದಾಯ ಮಾಡಿ ಎನ್‌ಒಸಿ ಪಡೆದುಕೊಳ್ಳುತ್ತಾರೆ. ಇದರಿಂದ ಪುರಸಭೆಗೆ ಸಾವಿರಾರು ರೂ. ಆದಾಯ ಖೋತಾ ಆಗುತ್ತಿದೆ. ತ್ವರಿತವಾಗಿ ಇ-ಖಾತೆ ಮಾಡಿಕೊಟ್ಟರೆ ಕಟ್ಟಡ ಪರವಾನಗಿಯನ್ನು ಪಡೆಯಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಇಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಪರಿಸರ ಇಂಜಿನ ಇಜಿನಿಯರ್ ಶಫಿನಾಜ್, ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಶಿವಕುಮಾರ್, ಆರ್.ಸೋಮಶೇಖರ್, ಎಂ.ಗಿರೀಶ್, ಮಹಮ್ಮದ್ ಹನೀಫ್, ಪಟೇಲ್ ರಮೇಶ್, ಲಕ್ಷ್ಮೇಗೌಡ, ಜಯಲಕ್ಷ್ಮಮ್ಮ, ಉಮಾಶಂಕರ್ ಇತರರು ಇದ್ದರು.

22.90 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ: ಪುರಸಭೆ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ 2025-26ನೇ ಬಜೆಟ್‌ನಲ್ಲಿ ಆರಂಭ ಶಿಲ್ಕು 5.27 ಕೋಟಿ ರೂ. ಸೇರಿದಂತೆ 13.16 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಒಟ್ಟಾರೆ 18.43 ಕೋಟಿ ರೂ.ಆದಾಯ ಹಾಗೂ 18.21 ಕೋಟಿ ರೂ.ಖರ್ಚು ಅಂದಾಜಿಸಲಾಗಿದ್ದು, 22.90 ಲಕ್ಷ ರೂ.ಉಳಿತಾಯ ಮಂಡಿಸಲಾಗಿದೆ.

ನಿರೀಕ್ಷಿತ ಆದಾಯ: ವಾನಿಜ್ಯ ಮಳಿಗೆಗಳ ಇತರ ಕಟ್ಟಡಗಳಿಂದ 9 ಲಕ್ಷ ರೂ., ಅಭಿವೃದ್ಧಿ ಶುಲ್ಕ 46 ಲಕ್ಷ ರೂ., ವ್ಯಾಪಾರ, ಪರವಾನಗಿ ಶುಲ್ಕ 13 ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಶುಲ್ಕಗಳು 21 ಲಕ್ಷ ರೂ., ರಸ್ತೆ ಕಟಿಂಗ್ 5 ಲಕ್ಷ ರೂ., ವಿದ್ಯುತ್‌ಚ್ಛಕ್ತಿ ಅನುದಾನ 2.20 ಕೋಟಿ ರೂ., ವಾರದ ಸಂತೆ ನೆಲ ಬಾಡಿಗೆ 18.75 ಲಕ್ಷ ರೂ., ನೀರಿನ ತೆರಿಗೆ, ಒಳಚರಂಡಿ, ನೀರು ಸರಬರಾಜು ಸಂಪರ್ಕ ಶುಲ್ಕ 44.75 ಲಕ್ಷ ರೂ., ಎಸ್‌ಎಫ್‌ಸಿ ಅನಿರ್ಬಂಧಿತ ಅನುದಾನ 1 ಕೋಟಿ ರೂ., ಎಸ್‌ಎಫ್‌ಸಿ ಇತರ ಅನುದಾನ 20 ಲಕ್ಷ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 1 ಕೋಟಿ ರೂ., ಜನನ, ಮರಣ ಪ್ರಮಾಣ ಪತ್ರ ಶುಲ್ಕ 4 ಲಕ್ಷ ರೂ., ಆಸ್ತಿ ತೆರಿಗೆ 1.13 ಕೋಟಿ ರೂ., ದಂಡ, ಖಾತಾ ಮತ್ತು ವರ್ಗಾವಣೆ ಶುಲ್ಕ 31 ಲಕ್ಷ ರೂ., ಶಾಸಕ ಮತ್ತು ಸಂಸದರ ಅನುದಾನ 1 ಕೋಟಿ ರೂ. ಹಾಗೂ ಆರಂಭ ಶಿಲ್ಕು 5.27 ಕೋಟಿ ರೂ.ಸೇರಿದಂತೆ 18.43 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net