ಸೋಂಕು ದೃಢ, ಹೃದಯಾಘಾತದಿಂದ ಸಾವು

23mnd2
Published on

ಮುಂಡಗೋಡ: ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಂಭಣ್ಣ ಕೋಳೂರ ಅವರಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿದ್ದು, ಗುರುವಾರ ಇಲ್ಲಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಅವರು ಹೃದಯಾಘಾತದಿಂದ ನಿಧನರಾದರು.

ಮೃತರ ಪತ್ನಿಗೆ ಮೊದಲು ಸೋಂಕು ತಗುಲಿ ಇಲ್ಲಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಿಸಲಾಗಿತ್ತು. ನಂತರ ಬುಧವಾರ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡು ಪರೀಕ್ಷೆ ಮಾಡಿದಾಗ ಇವರಿಗೂ ಸೋಂಕು ಪತ್ತೆಯಾಗಿತ್ತು. ನಂತರ ಇಬ್ಬರನ್ನೂ ಕಾರವಾರದ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಯಿತು. ಇಬ್ಬರೂ ರಾತ್ರಿ ಅಲ್ಲಿ ದಾಖಲಾಗಿ ನಂತರ ಆರೋಗ್ಯ ಸಹಜ ಸ್ಥಿತಿ ಇದೆ ಎಂದು ಬೆಳಗ್ಗೆ ಅಲ್ಲಿಂದ ಪಟ್ಟಣದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅವರು ಇಲ್ಲಿನ ಕೋವಿಡ್ ಕೇರ್ ಸೆಂಟರ್​ಗೆ ಬಂದಾಗ ರಕ್ತದೊತ್ತಡ, ಜ್ವರ ಹಾಗೂ ಇನ್ನಿತರ ಪರೀಕ್ಷೆ ಮಾಡಿದಾಗ ಆರೋಗ್ಯ ಸಹಜ ಸ್ಥಿತಿಯಲ್ಲಿತ್ತು. ನಂತರ ಮಧ್ಯಾಹ್ನ ಬಿಪಿ ಹತೋಟಿಗೆ ಬರಲಿಲ್ಲ. ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತವಾಗಿದ್ದು ಖಚಿತವಾಗಿದೆ.

ಮೃತರ ಪತ್ನಿಗೆ ಮತ್ತು ಮಗಳಿಗೆ ಸೋಂಕು ಪತ್ತೆಯಾಗಿ ಇಲ್ಲಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ: ಕರೊನಾ ಸೋಂಕು ದೃಢಪಟ್ಟು ಹೃದಯಾಘಾತದಿಂದ ನಿಧನರಾದ ಶಂಭಣ್ಣ ಕೋಳೂರ ಅವರ ಅಂತ್ಯಕ್ರಿಯೆ ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆಯಿತು. ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮೃತರ ಸಹೋದರನ ಪುತ್ರ ಪಿಪಿಇ ಕಿಟ್ ಧರಿಸಿ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ, ಆಡಳಿತ ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಸಿಪಿಐ ಪ್ರಭುಗೌಡ ಕಿರೇದಳ್ಳಿ, ರಾಘವೇಂದ್ರ ಗಿರಡ್ಡಿ, ಮತ್ತು ಪೌರ ಕಾರ್ವಿುಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಶಂಭಣ್ಣ ಕೋಳೂರ ಅವರು ಕೋವಿಡ್​ನಿಂದ ನಿಧನರಾಗಿಲ್ಲ. ಭಯಭೀತರಾಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಜವಾಗಿ ಈ ಘಟನೆ ದುರದೃಷ್ಟಕರ. ಮುಂಜಾಗ್ರತೆ ವಹಿಸಿ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವು. | ಶ್ರೀಧರ ಮುಂದಲಮನಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net