ಸೋಂಕಿತ ತಂದ ಆತಂಕ!

13ylp02
Published on

ಯಲ್ಲಾಪುರ: ಕರೊನಾ ಟೆಸ್ಟ್​ಗೆ ಒಳಪಡಿಸಿ ಆಸ್ಪತ್ರೆಯಲ್ಲೇ ಕೂರಿಸಿದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆಯಾಗಿ ಆಸ್ಪತ್ರೆ ಸಿಬ್ಬಂದಿ ಕಂಗಾಲಾಗುವಂತೆ ಮಾಡಿದ ಘಟನೆ ಗುರುವಾರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಕಳಚೆಯ ನಿವಾಸಿ ಅನಂತ ಹೆಬ್ಬಾರ (65) ತೀವ್ರ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಗುರುವಾರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕೋವಿಡ್ ಟೆಸ್ಟ್ (ರ್ಯಾಪಿಡ್ ಆಂಟಿಜೆನ್) ಮಾಡಿ ರಿಸಲ್ಟ್​ಗಾಗಿ ಸ್ವಲ್ಪ ಹೊತ್ತಿನವರೆಗೆ ಆಸ್ಪತ್ರೆಯಲ್ಲೇ ಕೂತಿರುವಂತೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಊಟ ಮಾಡಿದ ನಂತರ ಮಧ್ಯಾಹ್ನ 2.30ರ ಸುಮಾರಿಗೆ ಆಸ್ಪತ್ರೆಯಿಂದ ರೋಗಿ ನಾಪತ್ತೆಯಾಗಿದ್ದ.
ಪಾಸಿಟಿವ್ ಬರುತ್ತಿದ್ದಂತೆ ಅಲರ್ಟ್ ಆದ ಸಿಬ್ಬಂದಿ: ಟೆಸ್ಟ್ ರಿಸಲ್ಟ್ ಪಾಸಿಟಿವ್ ಬರುತ್ತಿದ್ದಂತೆ ರೋಗಿಗಾಗಿ ಹುಡಿಕಿದಾಗ ಆತ ಅಲ್ಲಿರಲಿಲ್ಲ. ಆಗ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಸುದ್ದಿ ತಿಳಿಸಿ, ರೋಗಿಗಾಗಿ ಹುಡುಕಾಟ ನಡೆಸಿದರು.
ನಡ್ಕೊಂಡು ಮನೆಗೆ ಹೊರಟಿದ್ದ!: ಪಾಸಿಟಿವ್ ಬಂದಿದ್ದ ರೋಗಿ ಮಾತ್ರ ಇದ್ಯಾವುದರ ಪರಿವೆಯೂ ಇಲ್ಲದೇ ಕಾಲ್ನಡಿಗೆಯಲ್ಲಿ ಮನೆಯತ್ತ ಹೊರಟಿದ್ದ. ಪಟ್ಟಣದ ಶಿರಸಿ ರಸ್ತೆಯ ಹೆಸ್ಕಾಂ ಕಚೇರಿ ಬಳಿ ಈತನನ್ನು ಪತ್ತೆಹಚ್ಚಿದ ಪೊಲೀಸರು ಹೆಬ್ಬಾರ ಹೆಲ್ಪ್​ಲೈನ್ ಆಂಬುಲೆನ್ಸ್ ಕರೆಸಿದರು.
ಆಂಬುಲೆನ್ಸ್ ಏರಲು ಹೈಡ್ರಾಮಾ: ಆಂಬುಲೆನ್ಸ್​ಗೆ ಏರುವಂತೆ ಪೊಲೀಸರು ತಿಳಿಸಿದರೂ ರೋಗಿ ಒಪ್ಪಿಲ್ಲ. ಹೆಬ್ಬಾರ ಹೆಲ್ಪ್​ಲೈನ್ ಆಂಬುಲೆನ್ಸ್​ನಲ್ಲಿ ಡ್ರೖೆವರ್ ಮಾತ್ರ ಪಿಪಿಇ ಕಿಟ್ ಧರಿಸಿದ್ದು ಆತನೊಬ್ಬನಿಂದ ರೋಗಿಯನ್ನು ಆಂಬುಲೆನ್ಸ್​ಗೆ ಹತ್ತಿಸುವುದು ಸಾಧ್ಯವಾಗಿಲ್ಲ. ಇನ್ನು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ತಾಲೂಕು ಆಸ್ಪತ್ರೆಯ ಆಂಬುಲೆನ್ಸ್ ಕರೆಸಿ ಸೋಂಕಿತನನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡುವ ಮೂಲಕ ಪ್ರಕರಣಕ್ಕೆ ಅಂತ್ಯಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net