ಸೊಪ್ಪು ತರಕಾರಿ ಬೆಲೆಯೂ ಗಗನಮುಖಿ !

bkt-15-11-a
ಬಾಗಲಕೋಟೆ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೊಪ್ಪು ದಾಸ್ತಾನು ಬಂದಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಚೌಕಾಸಿ ಮಾಡುತ್ತಿರುವುದು.
Published on

ಅಶೋಕ ಶೆಟ್ಟರ, ಬಾಗಲಕೋಟೆ: ಈಗಾಗಲೇ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದ ಗ್ರಾಹಕರಿಗೆ ಇದೀಗ ತರಕಾರಿ ಬೆಲೆಯೂ ಗಗನಮುಖಿ ಆಗಿರುವುದು ಗಾಯದ ಮೇಲೆ ಬರೆ ಬಿದ್ದಿದೆ.

ಬಾಗಲಕೋಟೆ ತರಕಾರಿ ಸಂತೆಯಲ್ಲಿ ಶನಿವಾರ ಬಹುತೇಕ ತರಕಾರಿ ಮತ್ತು ಸೊಪ್ಪುಗಳ ಬೆಲೆ ಆಕಾಶಕ್ಕೆ ಏರಿದ್ದರಿಂದ ಖರೀದಿಗೆ ಬಂದಿದ್ದ ಬಹುತೇಕ ಜನರು ಇದೇನಪ್ಪ ಹೀಗಾಗಿದೆ ಎಂದು ಗೊಣಗುತ್ತಲೇ ಕೆಜಿಗಟ್ಟಲೇ ಖರೀದಿ ಬದಿಗೊತ್ತಿ ಅರ್ಧ ಕೆಜಿ, ಕಾಲು ಕೆಜಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
ಸೌತೆಕಾಯಿ, ಚವಳಿಕಾಯಿ, ಬದನೆಕಾಯಿ, ಟೊಮ್ಯಾಟೋ, ಹಸಿಮೆಣಸಿನಕಾಯಿ ಬೆಲೆಯು ಕೆಜಿಗೆ ನೂರರ ಗಡಿ ದಾಟಿಕೊಂಡು ಹೋಗಿದೆ. ಈರುಳ್ಳಿ ಆಲೂಗಡ್ಡೆ ಕೆಜಿಗೆ ೫೦ ರೂ. ಆಗಿದ್ದರೆ, ಇನ್ನು ಕೊತ್ತಂಬರಿ, ಮೆಂತೆಪಲ್ಲೆ ಸಣ್ಣಕಟ್ಟಿಗೂ ೫೦ ರೂ. ಆಗಿದೆ. ಬೆಂಡೆಕಾಯಿ, ಡೊಣ್ಣಮೆನಸಿನಕಾಯಿ ಬೆಲೆಯೂ ಕಡಿಮೆ ಇರಲಿಲ್ಲ.

ಮೊದಲೆಲ್ಲ ನೂರು ರೂಪಾಯಿಯಲ್ಲಿ ಕೈಚೀಲ ತುಂಬೆಲ್ಲ ತರಕಾರಿ ತೆಗೆದುಕೊಂಡು ಹೋಗುತ್ತಿದ್ದೇವು. ಈಗ ಒಂದು ಸಾವಿರ ರೂ. ಖರ್ಚು ಮಾಡಿದರೂ ಕೈಚೀಲ ತುಂಬಿಲ್ಲ. ಹೀಗಾದರೆ ಮನೆ ನಡೆಸುವುದು ಹೇಗೆ? ಆರೋಗ್ಯ ಚನ್ನಾಗಿರಬೇಕಾದರೆ ಸೊಪ್ಪು, ತರಕಾರಿ ತಿನ್ನಿರಿ ಎಂದು ಡಾಕ್ಟರ್ ಹೇಳುತ್ತಾರೆ. ಇಲ್ಲಿ ನೋಡಿದರೆ ಕೆಜಿಗೆ ನೂರು ರೂಪಾಯಿ ಒಳಗಡೆ ಯಾವುದೇ ತರಕಾರಿ ಸಿಗುತ್ತಿಲ್ಲ. ಇನ್ನು ಎಲ್ಲಿಂದ ತರಕಾರಿ ತಿನ್ನೋದು? ಮೊದಲೇ ದಿನಸಿ ವಸ್ತುಗಳು ಬೆಲೆ ಏರಿಕೆಯಿಂದಾಗಿ ಸಾಂಬರ್ ಗೆ ತೊಗರಿ ಬೇಳೆ ಬಿಟ್ಟು ಟೊಮ್ಯಾಟೋ ಸಾರು ಮಾಡುತ್ತಿದ್ದೇವು. ಈಗ ಟೊಮ್ಯಾಟೋ ಸಹ ಕೆಜಿಗೆ ನೂರು ರೂ. ಆಗಿದೆ. ಅನ್ನಕ್ಕೆ ಸಾಂಬರ್ ಜೋಡಿಸುವುದೇ ಕಷ್ಟ ಎನ್ನುವಂತಾಗಿದೆ ಎಂದು ಅಳೆದು ತೂಗಿ ಕಾಲು ಕೆಜಿ ಟೊಮ್ಯಾಟೋ ಖರೀದಿ ಮಾಡುತ್ತಿದ್ದ ಮಹಿಳೆ ರಂಗಮ್ಮ ನೊಂದುಕೊಂಡು ಹೇಳಿದರು.

ದಾಸ್ತಾನು ಬರುತ್ತಿಲ್ಲ :
ತರಕಾರಿ ಮಾರುಕಟ್ಟೆಗೆ ಕಳೆದ ಒಂದು ವಾರದಿಂದ ತರಕಾರಿಯೇ ಬರುತ್ತಿಲ್ಲ. ಏನು ಮಾಡುವುದು? ಇದೀಗ ಮುಂಗಾರು ಮಳೆ ಆರಂಭವಾಗಿದೆ. ಇದೀಗ ರೈತರು ತರಕಾರಿ ಬಿತ್ತನೆ ಮಾಡುತ್ತಿದ್ದಾರೆ. ಬೆಳೆದು ಮಾರುಕಟ್ಟೆಗೆ ಬರಬೇಕು ಎಂದರೆ ಕನಿಷ್ಠ ಒಂದುವರೆ ತಿಂಗಳಾದರೂ ಬೇಕು. ಅಲ್ಲಿವರೆಗೂ ತರಕಾರಿ ಬೆಲೆ ಕಡಿಮೆ ಆಗಲ್ಲ. ಅತಿಯಾದ ಮಳೆ ಆಗಿದ್ದರಿಂದ ಸೊಪ್ಪು ಬೆಳೆ ಹಾಳಾಗಿದೆ. ಹೀಗಾಗಿ ೧೦ ರಿಂದ ೨೦ ರೂ. ಇದ್ದ ಕೊತಂಬರಿ ಕಟ್ಟಿಗೂ ಇದೀಗ ೫೦ ರಿಂದ ೭೫ ರೂ. ಆಗಿದೆ. ಬೆಲೆ ಏರಿಕೆಯಿಂದಾಗಿ ವ್ಯಾಪಾರ ಸಂಪೂರ್ಣ ಕಡಿಮೆ ಆಗಿದೆ. ನಮಗೂ ತುಂಬ ಕಷ್ಟವಾಗಿದೆ ಎಂದು ತರಕಾರಿ ವ್ಯಾಪಾರಿ ಕಂಕಣಕೊಪ್ಪ ಗ್ರಾಮದ ಶಂಕರಪ್ಪ ಅವರು ಹೆಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net