ಸೈಬರ್ ಅಪರಾಧ ಜಾಗೃತಿ ಅಗತ್ಯ

karwar SP (shivaprasad)
Published on

ಕಾರವಾರ: ಸೈಬರ್ ಅಪರಾಧಗಳ ಬಗ್ಗೆ ಜನರು ಜಾಗೃತರಾಗಬೇಕಿದೆ ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟಿಪಿ ಪಡೆದು, ಕ್ಯೂ ಆರ್ ಕೋಡ್ ಕಳಿಸಿ, ಸೈನಿಕರ ಹೆಸರಿನಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಶೇ. 10 ರಷ್ಟು ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಗೆ ಬರುತ್ತಿವೆ. ಬಂದರೂ ವಿಳಂಬವಾಗಿ ಬರುವುದರಿಂದ ಪ್ರಕರಣ ಪತ್ತೆ ಕಷ್ಟವಾಗುತ್ತಿದೆ.

ಇದರಿಂದ ಇಲಾಖೆಯಿಂದ ಜನರಿಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುತ್ತಿದೆ. ಕಾಲೇಜ್​ಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರೂ ಜಾಗೃತರಾಗಿ ಹಾಗೊಮ್ಮೆ ಮೋಸವಾದಲ್ಲಿ 1 ಗಂಟೆಯ ಒಳಗೆ ದೂರು ನೀಡಿದಲ್ಲಿ ಹಣ ಕಳೆದುಕೊಳ್ಳುವುದನ್ನು ಕಡಿಮೆ ಮಾಡಬಹುದು ಎಂದರು.

ಜಿಲ್ಲೆಯ ಸೈಬರ್, ವಾಣಿಜ್ಯ ಅಪರಾಧ ಮತ್ತು ಮಾದಕ ದ್ರವ್ಯ ಅಪರಾಧ ತಡೆ (ಸಿಇಎನ್)ಠಾಣೆಯಲ್ಲಿ 2018 ರಲ್ಲಿ 17 ಪ್ರಕರಣಗಳು ದಾಖಲಾಗಿದ್ದು 2 ಪ್ರಕರಣಗಳನ್ನು ಪತ್ತೆ ಹಚ್ಚಿ, ಒಬ್ಬ ಆರೋಪಿ ಹಾಗೂ 1.37 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 2019 ರಲ್ಲಿ 44 ಪ್ರಕರಣಗಳು ದಾಖಲಾಗಿದ್ದು, 3 ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 70 ಸಾವಿರ ಮೌಲ್ಯದ ಹಣ ವಶಕ್ಕೆ ಪಡೆಯಲಾಗಿದೆ. 2020 ರಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. 9480805267 ಸಂಖ್ಯೆಗೆ ಕರೆ ಮಾಡಿ ದೂರು ಮಾಹಿತಿ ನೀಡಬಹುದು ಎಂದರು.

18 ಕೆಜಿ ಮಾದಕ ದ್ರವ್ಯ ವಶ: ಜಿಲ್ಲೆಯಲ್ಲಿ 2017 ರಿಂದ ಇದುವರೆಗೆ ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿದಂತೆ 68 ಪ್ರಕರಣಗಳು ದಾಖಲಾಗಿವೆ. 135 ಆರೋಪಿಗಳನ್ನು ಬಂಧಿಸಿ ಅವರಿಂದ 11.89 ಲಕ್ಷ ರೂ. ಮೌಲ್ಯದ 81.857 ಕೆಜಿ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಲೇಜ್​ಗಳ ಸುತ್ತ ಮಾದಕ ದ್ರವ್ಯ ವ್ಯಾಪಾರ ಮಾಡುವವರ ಮೇಲೆ ನಿಗಾ ಇಡಲಾಗಿದೆ. ಮಾದಕ ವ್ಯಸನಿಗಳಾದ ವಿದ್ಯಾರ್ಥಿಗಳು ಅದನ್ನು ಬಿಡುವ ಮನಸ್ಸಿದ್ದಲ್ಲಿ ಅದಕ್ಕೂ ನಾವು ಸಂಬಂಧಪಟ್ಟ ಇಲಾಖೆಯ ಜತೆ ರ್ಚಚಿಸಿ ಕ್ರಮ ವಹಿಸಲಾಗುವುದು ಎಂದು ಎಸ್​ಪಿ ತಿಳಿಸಿದರು.

ಶರಾವತಿ ಪಡೆ ನಿಗಾ: ಮಹಿಳೆಯರ ರಕ್ಷಣೆಗಾಗಿ ಶರಾವತಿ ಪಡೆ ರಚಿಸಲಾಗಿದೆ. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಈ ಸಿಬ್ಬಂದಿ ಇದ್ದಾರೆ. ಇವರು ರಾತ್ರಿ ವೇಳೆ ಗ್ರಾಮೀಣ ಭಾಗದಲ್ಲಿ ಗಸ್ತು ತಿರುಗಲಿದ್ದಾರೆ. ಮಹಿಳೆಯರಿಗೆ ತೊಂದರೆ ಉಂಟಾದಲ್ಲಿ ಸಂಬಂಧಪಟ್ಟ ಠಾಣೆಗೆ ಅಥವಾ ನೇರವಾಗಿ ಶರಾವತಿ ಪಡೆ ಸಿಬ್ಬಂದಿಗೆ ಕರೆ ಮಾಡಿದಲ್ಲಿ ನೇರವಾಗಿ ಅವರ ರಕ್ಷಣೆಗೆ ತಕ್ಷಣ ಧಾವಿಸಲಾಗುವುದು ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net