

ಬಾಗಲಕೋಟೆ: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವು ಖುಷಿ ಹಾಗೂ ನೋವು ಎರಡನ್ನೂ ಸಮಾನವಾಗಿ ನೀಡಿದ ದಿನವಾಗಿದೆ. ಅನೇಕ ಯೋಧರ ಬಲಿದಾನ ನೋವು ಕೊಡುವ ಸಂಗತಿಯಾಗಿದ್ದರೆ, ಕ್ಲಿಷ್ಟಕರ ಸಂದರ್ಭದಲ್ಲೂ ಭಾರತಕ್ಕೆ ಗೆಲುವು ತಂದು ಕೊಟ್ಟ ಯೋಧರ ದಿಟ್ಟತನ ಹೆಮ್ಮೆ ಮೂಡಿಸುತ್ತದೆ ಎಂದು ಬಾಗಲಕೋಟೆಯ ೩೭ನೇ ಕರ್ನಾಟಕ ಎನ್‌ಸಿಸಿ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಸಂಜಯ ಕದಂ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧಕ್ಕೆ ನಾನೂ ಸಾಕ್ಷಿಯಾಗಿದ್ದೆ ಅಲ್ಲಿನ ಸವಾಲು, ಕಷ್ಟಗಳು ಯೋಧರಿಗೆ ಮಾತ್ರವೇ ಅರ್ಥವಾಗಬಲ್ಲದು. ಅಲ್ಲಿನ ಕಥನ ಜನಸಾಮಾನ್ಯರಿಗೆ ರೋಚಕ ಅನಿಸಬಹುದು. ಆದರೆ ಯೋಧರು ಪಟ್ಟ ಕಷ್ಟ ಪದಗಳಲ್ಲಿ ವಿವರಿಸಲು ಅಸಾಧ್ಯವಾದದ್ದು, ಆದರೆ ಭಾರತದ ಯೋಧರ ರಾಷ್ಟ್ರಪ್ರೇಮವನ್ನು ಆ ಯುದ್ಧ ಸಾರಿ, ಸಾರಿ ಹೇಳಿದೆ ಎಂದು ಬಣ್ಣಿಸಿದರು.
ಇದನ್ನು ವಿಜಯ ದಿವಸವಾಗಿ ಆಚರಿಸುತ್ತೇವೆಯಾದರೂ ನೂರಾರು ಯೋಧರು ಪ್ರಾಣಬಿಟ್ಟಿದ್ದಾರೆ, ಅನೇಕರು ಗಾಯಾಳುಗಳಾಗಿದ್ದಾರೆ ಅವರೆಲ್ಲರ ತ್ಯಾಗ, ಬಲಿದಾನದ ಪರಿಣಾಮವೇ ಅಂದು ಗೆಲುವು ಸಾಽಸಲು ಸಾಧ್ಯವಾಯಿತು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ೫೨೭ ಯೋಧರು ಮಡಿದಿದ್ದಾರೆ. ರೈತರು ಹಾಗೂ ಸೈನಿಕರು ದೇಶದ ಕಣ್ಣುಗಳಿದ್ದಂತೆ. ಅವರನ್ನು ಗೌರವದಿಂದ ನೋಡುವ ಕೆಲಸವಾಗಬೇಕು. ಅವರ ತ್ಯಾಗ, ಬಲಿದಾನವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯದ ಮಾತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಗಾಯಗೊಂಡ ಸಿಪಾಯಿ ರಮೇಶ ಹರಿಜನ, ಹವಾಲ್ದಾರ ಅರ್ಜುನ ಹೊಸಹಳ್ಳಿ, ನಾಯಕ ಸುಭಾಸ ಗದಗಿನ ಅವರನ್ನು ಸನ್ಮಾನಿಸಲಾಯಿತು. ಹುತಾತ್ಮ ವೀರರ ಕುಟುಂಬದ ಚೋಳಚಗುಡ್ಡದ ನಿರ್ಮಲಕಾ ಕುಲಕರ್ಣಿ, ಬೀಳಗಿಯ ಮಯಾದೇವಿ ಪೋತರಾಜ, ಇಳಕಲ್ಲಿನ ಲಕ್ಷ್ಮೀಬಾಯಿ ಜಾಧವ, ಮಾಚಕನೂರಿನ ರುಕ್ಷ್ಮಿಣಿ ಮಿರ್ಜಿ, ಶಾಂತಾಬಾಯಿ ತೇಲಿ ಅವರನ್ನು ಸತ್ಕರಿಸಲಾಯಿತು. ಅಲ್ಲದೇ ನಿವೃತ್ತಿ ನಂತರ ಪೊಲೀಸ್ ಇಲಾಖೆ, ಸರ್ಕಾರದ ವಿವಿಧ ಇಲಾಖೆ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರು ಹಾಗೂ ಹಿರಿಯ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಅರ್ಜುನ ಕೋರಿ, ಅಧ್ಯಕ್ಷ ಗದಿಗೆಪ್ಪ ಅರಕೇರಿ, ಅರೇ ಸೇನಾಪಡೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ವಸ್ತ್ರದ, ತಾಲೂಕಾ ಘಟಕಗಳ ಅಧ್ಯಕ್ಷ ಪ್ರಶಾಂತ ಸಬರದ, ಸುಭಾಸ ಕೋಟಿ, ಬಾಲಪ್ಪ ಕಿರಸೂರ, ಬಸಪ್ಪ ಮುಂಗರವಾಡಿ, ಮಲ್ಲಪ್ಪನ ಕೋಮಾರದೇಸಾಯಿ, ಯಂಕಣ್ಣ ಹಟ್ಟಿ, ರಾಮು ಶಿರೋಳ, ರಾಮಣ್ಣ ಯಡಹಳ್ಳಿ, ಶ್ರೀಶೈಲ ಪಸಾರ, ಸಂಜೀವ ಬಾನೆ, ಹಣಮಂತ ಕೇಸರಿ ಇತರರು ಇದ್ದರು.