

ಕಡೂರು: ಸೈನಿಕರ ತ್ಯಾಗದ ಲ ಹಾಗೂ ನಿಸ್ವಾರ್ಥ ಸೇವೆಯಿಂದ ದೇಶ ಸಮೃದ್ಧವಾಗಿದೆ ಎಂದು ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಜಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಿವೃತ್ತ ಸೈನಿಕರ ಸಂಘ, ತಾಲೂಕು ಸರ್ಕಾರಿ ನೌಕರರ ಸಂಘ, ಸೋಷಿಯಲ್ ಕ್ಲಬ್, ಪ್ರಥಮದರ್ಜೆ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಧರು ಮತ್ತು ರೈತರು ಇಲ್ಲದಿದ್ದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರಗಳು ಎಲ್ಲ ರೀತಿಯ ಸೌಲಭ್ಯಗಳನ್ನು ರೈತರು ಮತ್ತು ಯೋಧರಿಗೆ ನೀಡಬೇಕಿದೆ. ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಲು ಯೋಧರ ತ್ಯಾಗ, ಬಲಿದಾನ ಕಾರಣ ಎಂದರು.
ಹಣ, ಆಸ್ತಿಗಳಿಸಲಷ್ಟೇ ಜನರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಯೋಧರಿಂದಾಗಿ ನಮಗೆ ಎಲ್ಲ ರೀತಿಯ ರಕ್ಷಣೆ ದೊರಕುತ್ತಿದೆ. ಅವರ ತ್ಯಾಗದ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕಿದೆ. ಯುವಜನರು ಯೋಧರಾಗಲು ಹೆಚ್ಚಿನ ಆಸಕ್ತಿ ತೋರಬೇಕಿದೆ. ಯೋಧರ ಕುಟುಂಬಗಳಿಗೆ ಎಲ್ಲ ರೀತಿಯ ರಕ್ಷಣೆ ದೊರಕಬೇಕಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಕುಟುಂಬಗಳಿಗೆ ಸಮಾಜ ಗೌರವ ನೀಡಬೇಕಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಭಾರತೀಯ ಯೋದರಲ್ಲಿ ಶಿಸ್ತು ಮತ್ತು ಚಾಣಕ್ಷತನವಿದೆ. ಇವರ ಹೋರಾಟ ಮುಂದಿನ ಪೀಳಿಗೆಯ ಮಕ್ಕಳಿಗೆ ಸ್ಫೂರ್ತಿದಾಯಕ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ ಶೇಖರಪ್ಪ, ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ಹೋರಾಡಿದ್ದರ ಬಗ್ಗೆ ವಿವರಿಸಿದರು. ಸಾಹಿತಿ ದೇವನೂರು ಅಚ್ಯುತ್‌ರಾವ್ ರಚಿಸಿದ ಭಾವ ಕನ್ನಿಕೆ ಕೃತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಯೋಧರಿಗೆ ವಿತರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ತಾಲೂಕು ಅಧ್ಯಕ್ಷ ಲಿಂಗರಾಜು, ಸೋಷಿಯಲ್ ಕ್ಲಬ್ ಅಧ್ಯಕ್ಷ ಎಸ್.ಬಸವರಾಜ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ. ಎಸ್.ಬಿ.ಮಂಜುನಾಥ್, ದೈಹಿಕ ಶಿಕ್ಷಣಾಧಿಕಾರಿ ತಿಮ್ಮರಾಜು, ಎನ್.ಮಹೇಶ್, ಸುರೇಶ್, ಜ್ಯೋತಿ ಇತರರಿದ್ದರು.