

ಬಾಗಲಕೋಟೆ: ಸೇವೆ ಎಂಬುದಕ್ಕೆ ಆಂದೋಲನ ರೂಪ ಒದಗಿಸಲು ಆರಂಭಗೊಂಡ ಸೇವಾ ಭಾರತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ವರ್ಷವಿಡೀ ವಿವಿಧ ಸೇವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಡಾ.ರಘು ಅಕಮಂಚಿ ಹೇಳಿದರು.
ನಗರದ ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ಪದಾಧಿಕಾರಿಗಳ ಘೋಷಣೆ ಮತ್ತು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
೧೯೯೯ರಲ್ಲಿ ಸೇವಾ ಭಾರತಿ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿತು. ಸೇವೆಗೆ ದೊಡ್ಡದಾದ ಆಂದೋಲನ ರೂಪ ಒದಗಿಸುವ ಉದ್ದೇಶ ಹೊಂದಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಮಂಗೇಶ ಬೇಂಡೆ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು.
ವಿಪತ್ತು ನಿರ್ವಹಣೆ, ಶಾಲೆಗಳ ಆರಂಭ ಸೇರಿದಂತೆ ವಿವಿಧ ರೂಪಗಳಲ್ಲಿ ಸೇವಾ ಕಾರ್ಯಗಳನ್ನು ಸಂಸ್ಥೆ ಮಾಡುತ್ತ ಬಂದಿದೆ. ಈ ವರ್ಷ ರಜತ ಮಹೋತ್ಸವದ ಭಾಗವಾಗಿ ರಕ್ಷಾಬಂಧನ, ಸಸ್ಯಾಜ್ಞಾನ, ಕೊಳಗೇರಿ ಪ್ರದೇಶ, ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ, ಮಕ್ಕಳಿಗಾಗಿ ಬಾಲ ಸಂಗಮ, ವಿದ್ಯಾರ್ಥಿನಿಯರಿಗಾಗಿ ಕಿಶೋರಿ ಸಂಗಮ, ಮಹಿಳಾ ಸಂಗಮ, ವಿವಿಧ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಸಮಾರಂಭಗಳನ್ನು ಏರ್ಪಡಿಸುವ ಯೋಜನೆಯಿದೆ. ಇಡೀ ಸಮಾಜವನ್ನು ಒಳಗೊಂಡು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ, ಆರ್‌ಎಸ್‌ಎಸ್ ಇಲ್ಲದೇ ನಾವು ದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲಿ ಸಂಘ ತನ್ನ ನಿಸ್ವಾರ್ಥ ಕಾರ್ಯಚಟುವಟಿಕೆಗಳನ್ನು ಮಾಡುತ್ತ ಬಂದಿದೆ. ಸೇವಾ ಭಾರತಿ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮಗಳು ವರ್ಷ ಪೂರ್ತಿ ಜರುಗಲಿದ್ದು, ಸಮಾಜದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗವಹಿಸಬೇಕು. ಸೇವೆಗೆ ಪ್ರೇರಣೆ ನೀಡುವ ಕೆಲಸ ಈ ಸಂಘಟನೆ ಮಾಡುತ್ತ ಬಂದಿದ್ದು, ಪ್ರತಿಯೊಬ್ಬರೂ ತನು, ಮನ, ಧನದಿಂದ ಸಹಾಯ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ, ಹಿರಿಯ ತಜ್ಞ ಡಾ.ಸುಭಾಸ್ ಪಾಟೀಲ, ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ.ಗಂಗಾಧರ ಅಂಗಡಿ ವೇದಿಕೆಯಲ್ಲಿದ್ದರು.