

ಅರಕಲಗೂಡು: ಸಾರ್ವಜನಿಕರಲ್ಲಿ ಶುಚಿತ್ವದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ ಎಂದು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ಮೊಗವಿರ್ ತಿಳಿಸಿದರು.
ತಾಲೂಕಿನ ಬೈಚನಹಳ್ಳಿ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೋಡು ಕಾರ್ಯಕ್ಷೇತ್ರದ ಉದ್ದೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದ ನಂತರ ಮಾತನಾಡಿದ ಅವರು, ಕೇವಲ ಸಂಘ ಸಂಸ್ಥೆಗಳಷ್ಟೇ ಅಲ್ಲದೆ ಪ್ರತಿ ಹಳ್ಳಿಗಳಲ್ಲೂ ಸಾರ್ವಜನಿಕರು ಕೂಡ ಸ್ವಚ್ಛತಾ ಕಾರ್ಯ ನಡೆಸಬೇಕು. ಆರೋಗ್ಯಕರ ದೃಷ್ಟಿಯಿಂದ ಹಳ್ಳಿಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ 10 ಕಡೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ದೇವಸ್ಥಾನಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಸಂಸ್ಥೆಯ ವಲಯ ಮೇಲ್ವಿಚಾರಕಿ ಶೀಲಾ, ಒಕ್ಕೂಟದ ಅಧ್ಯಕ್ಷ ಸಿದ್ದಲಿಂಗಪ್ಪ, ಉಪಾಧ್ಯಕ್ಷ ಕಾಂತರಾಜ್, ಪ್ರಗತಿಬಂಧು ಸಂಘದ ಸದಸ್ಯರು, ಸೇವಾಪ್ರತಿನಿಧಿ ರೂಪಾ, ಗ್ರಾಮಸ್ಥರು ಪಾಲ್ಗೊಂಡಿದ್ದರು.