ಸೇವಾ ಚಟುವಟಿಕೆ ಸಮಾಜಕ್ಕೆ ಪೂರಕವಾಗಿರಲಿ

Oplus_131072
Oplus_131072
Published on

ವಿರಾಜಪೇಟೆ: ಸೇವೆಗೆ ಕೊನೆಯಿಲ್ಲ, ಧರ್ಮ, ಜಾತಿ ವರ್ಗಗಳಿಂದ ಸೇವಾ ಕಾರ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಅರಿತಲ್ಲಿ ಮಾತ್ರ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ವಿರಾಜಪೇಟೆ ತಾಲೂಕು ತಹಸೀಲ್ದಾರ್ ಎಚ್.ಎನ್. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಪೊನ್ನಂಪೇಟೆ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಶೆಟ್ಟಿಗೇರಿ ಆವರಣದಲ್ಲಿ ಮಂಗಳವಾರ ಕಾಲೇಜು ಶಿಕ್ಷಣ ಇಲಾಖೆ, ಕೊಡಗು ವಿಶ್ವವಿದ್ಯಾನಿಲಯ, ಕಾವೇರಿ ಪದವಿ ಕಾಲೇಜು ವಿರಾಜಪೇಟೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸೇವಾ ಮನೋಭಾವವು ವಿದ್ಯಾರ್ಥಿ ಜೀವನದಲ್ಲಿಯೇ ಆರಂಭವಾಗಬೇಕು ಎಂಬ ಪರಿಕಲ್ಪನೆಯಿಂದ ಗಾಂಧೀಜಿ ಅವರು ಯುವ ಜನರಲ್ಲಿ ಸೇವಾ ಘಟಕವನ್ನು ಆರಂಭಿಸುವ ಕನಸು ಕಂಡಿದ್ದರು. ನಾಯಕತ್ವ ಗುಣಗಳನ್ನು ವಿದ್ಯಾರ್ಥಿ ಜೀವನದಿಂದಲೇ ಆರಂಭವಾದಲ್ಲಿ ಮಾತ್ರ ಉತ್ತಮ ನಾಯಕನಾಗಬಹುದು. ಸಾಮಾಜಿಕ ಪ್ರಜ್ಞೆ ಸರ್ವರಲ್ಲಿ ಜಾಗೃತವಾಗಬೇಕು. ದೇಶದಲ್ಲಿ ಹಲವು ರೀತಿಯಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ನಡೆಸಿದಂತಹ ಕಾರ್ಯಗಳು ದೇಶ ಮೆಚ್ಚಿದೆ. ಅದರಂತೆ ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ಅಂಶಗಳು ಜೀವನದಲ್ಲಿ ಅಳವಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಪಣ ತೊಡುವಂತೆ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚೇರಂಡ ಕಾವೇರಮ್ಮ ಮೋಟಯ್ಯ ಮಾತನಾಡಿ ರಾಷ್ಟ್ರಧರ್ಮ, ದೇಶಭಕ್ತಿ, ಸಮಾಜ ಸೇವೆ ಇವುಗಳೆಲ್ಲವೂ ವಿದ್ಯಾರ್ಥಿ ಜೀವನದಲ್ಲಿ ನೆಲೆಯಾಗುವ ವಿಷಯಗಳಾಗಿವೆ. ಸ್ವಚ್ಛತೆ ಎಂಬುದು ಬಾಲ್ಯದಿಂದಲೇ ಆರಂಭವಾಗಬೇಕು. ಇದು ಕಾರಣ ಜಾಗೃತ ಸಮಾಜ ರೂಪಿಸಲು ಮುನ್ನುಡಿಯಾಗುತ್ತದೆ. ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಯಕನಾಗಲು ಪ್ರಯತ್ನಿಸಬೇಕು. ಶಿಬಿರದ ಅಯೋಜನೆಯಿಂದ ಗ್ರಾಮಗಳ ಅಭ್ಯುದಯವಾಗುತ್ತದೆ. ಎಳು ದಿನಗಳು ನಡೆಯುವ ಶಿಬಿರಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನಾ ಅವರು ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿಬೋಧಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸಮಾಜ ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಸೃಷ್ಟಿ ಮಾಡಲು ಸಹಕಾರಿಯಾಗಿದೆ. ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಸ.ಹಿ.ಪ್ರಾ ಶಾಲೆ ಬಿ.ಶೆಟ್ಟಿಗೇರಿ ಶಾಲಾಭಿವೃದ್ಧಿ ಅಧ್ಯಕ್ಷೆ ವೈ.ಸಿ.ಕವಿತಾ, ಗ್ರಾಮದ ಹಿರಿಯರಾದ ನಾಮೇರ ರಾಮು ನಂಜಪ್ಪ, ಸ.ಹಿ.ಪ್ರಾ.ಶಾಲೆ ಬಿ.ಶೆಟ್ಟಿಗೇರಿ ಸಹ ಶಿಕ್ಷಕ ಅಪ್ಪಂಡೇರಂಡ ಸುಜ್ಯೋತಿ ಸುರೇಶ್, ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಬಿ.ಬಿ.ಸುನಿಲ್‌ಕುಮಾರ್, ಸಹ ಶಿಬಿರಾಧಿಕಾರಿ ಅನುಪಮಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net