ಸೇಂಟ್ ಆನ್ಸ್ ಪದವಿ ಕಾಲೇಜಿಗೆ ನ್ಯಾಕ್ ಬಿ+ ಮಾನ್ಯತೆ

31 vpt 2
Published on

ವಿರಾಜಪೇಟೆ: ಕೊಡಗು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ವಿರಾಜಪೇಟೆ ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿಗೆ ಯುಜಿಸಿ ನ್ಯಾಕ್ ವತಿಯಿಂದ ಬಿ+ ಗ್ರೇಡ್ ಮಾನ್ಯತೆ ಲಭಿಸಿದೆ.

ಮೇ ತಿಂಗಳ 15,16ರಂದು ನ್ಯಾಕ್ ಸಮಿತಿಯು ಕಾಲೇಜನ್ನು ಮೌಲ್ಯಾಂಕನಕ್ಕೆ ಒಳಪಡಿಸಿ ಈ ಮಾನ್ಯತೆಯನ್ನು ನೀಡಿದೆ. ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈಮುತ್ತು ಮಾತನಾಡಿ, 2007ರಲ್ಲಿ ಆರಂಭಗೊಂಡ ನಮ್ಮ ಪದವಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್‌ಎಸ್‌ಎಸ್, ಉದ್ಯೋಗ ಹಾಗೂ ವೃತ್ತಿ ಕೌಶಲ ಘಟಕ, ಯುವ ರೆಡ್ ಕ್ರಾಸ್ ಇನ್ನೂ ಮುಂತಾದ ಘಟಕಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಯ ಗುಣಮಟ್ಟದ ಶಿಕ್ಷಣಕ್ಕೆ ಅನುಗುಣವಾಗಿ ನುರಿತ ಉಪನ್ಯಾಸಕರು, ಸುಸಜ್ಜಿತ ಸೌಲಭ್ಯಗಳು, ಗ್ರಂಥಾಲಯ ವ್ಯವಸ್ಥೆಯು ಲಭ್ಯವಿದೆ. ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆಯನ್ನು ಹಲವು ಕ್ಷೇತ್ರಗಳಲ್ಲಿ ಮಾಡಿರುತ್ತಾರೆ. ಸ್ನಾತಕೋತ್ತರ ಎಂ.ಕಾಂ ವಿಭಾಗವು ಆರಂಭಿಸಲಾಗಿದ್ದು, ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಿದೆ ಎಂದರು.

ನಗರಗಳಲ್ಲಿ ಸಿಗುವಂತಹ ಶಿಕ್ಷಣ ಸೌಲಭ್ಯಗಳನ್ನು ನಮ್ಮ ಸಂಸ್ಥೆಯಲ್ಲಿ ಸ್ಥಳೀಯವಾಗಿ ನೀಡುತ್ತಿರುವ ಹೆಮ್ಮೆ ತಮಗಿದೆ. ಇದೀಗ ಪ್ರತಿಷ್ಠಿತ ನ್ಯಾಕ್ ಸಮಿತಿಯಿಂದ ಬಿ+ ಗ್ರೇಡ್ ಲಭಿಸಿದ್ದು ಸಂಸ್ಥೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಸೇಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ, ಉಪನ್ಯಾಸಕ ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net