

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಾದ್ಯಂತ ಎಲ್ಲ ಅಧೀನ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ 9 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅದಾಲತ್ ಶಿಬಿರದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಕಾನೂನಿನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಎಂ.ಎಂ.ಆರ್.ಡಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರ ವಾಹನ ಅಪಘಾತ ಪರಿಹಾರ ಕೋರಿರುವ ಪ್ರಕರಣಗಳು, ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ದ ಪ್ರಕರಣ, ಬ್ಯಾಂಕ್‍ಗಳಿಗೆ ಸಂಬಂಧಿಸಿದ ಪ್ರಕರಣ, ವೈವಾಹಿಕ ಅಥವಾ ಜೀವನಾಂಶ ಪ್ರಕರಣ, ಆಸ್ತಿಯಲ್ಲಿ ವಿಭಾಗ ಕೋರಿರುವ ದಾವೆಗಳು, ಇತರೆ ಸಿವ್ಹಿಲ್ ವ್ಯಾಜ್ಯಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಬ್ಯಾಂಕ್, ನೀರು ಮತ್ತು ವಿದ್ಯುತ್‍ಗೆ ಸಂಬಂಧಿಸಿದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ.
ವಕೀಲರು, ಸಾರ್ವಜನಿಕರು ಹಾಗೂ ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎನ್.ವಿ.ವಿಜಯ ಮತ್ತು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.