ಸೆಕ್ಸ್‌ ವರ್ಕರ್‌ ಪಟ್ಟಿಯಲ್ಲಿ ಮಾನವಂತರ ಮನೆಯ ಹೆಣ್ಣು ಮಕ್ಕಳ ಹೆಸರು !!

Sex-worker
Published on

ಕಾರವಾರ: ಏಡ್ಸ್ ತಡೆಗಟ್ಟುವ ಯೋಜನೆಯಲ್ಲಿ ಮಹಿಳಾ ಸೆಕ್ಸ್ ವರ್ಕರ್‌ಗಳಿಗೆ ನೆರವು ನೀಡುವ ನೆಪದಲ್ಲಿ ಮಹಿಳಾ ಕ್ರಾಂತಿ ಫೀಮೇಲ್ ಸೆಕ್ಸ್ ವರ್ಕರ್ಸ್ ಟಾರ್ಗೆಟ್ ಇಂಟರ್‌ವೆನ್ಶನ್ ಎಂಬ ಸಂಸ್ಥೆ ಜಿಲ್ಲೆಯಲ್ಲಿ ಅವ್ಯವಹಾರ ನಡೆಸಿದೆ ಎಂದು ಸಂಸ್ಥೆಯ ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ.
ಡಬ್ಲುಎಚ್‌ಆರ್ ಆರ್‌ಕೆ ಫೌಂಡೇಷನ್ ವರ್ಲ್ಡ್ ಹ್ಯೂಮನ್ ರೈಟ್ಸ್ ಸಂಸ್ಥೆಯ ಪ್ರಮುಖರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಿಳಾ ಕ್ರಾಂತಿ ಸಂಸ್ಥೆಯ ನಿವೃತ್ತ ಅಕೌಂಟ್ ಅಧಿಕಾರಿ ಸೌಮ್ಯಾ ರಾವ್ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿ ಗಂಭೀರ ಆರೋಪಗಳನ್ನು ಮಾಡಿದರು.
ರಾಷ್ಟ್ರೀಯ ಹಾಗೂ ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿಯಿಂದ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ಕಾಗಿ ನೇಮಕವಾದ ಸಂಸ್ಥೆ ಇದಾಗಿದೆ. ಸರ್ಕಾರದಿಂದ ಅನುದಾನ ಪಡೆಯುತ್ತದೆ. ಗುರಿಯನ್ನು ತಲುಪುವ ಸಲುವಾಗಿ ಸೆಕ್ಸ್ ವರ್ಕರ್ ಅಲ್ಲದ ಯುವತಿ, ಮಹಿಳೆಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಆಧಾರ ಕಾರ್ಡ್ ಮಾಡಿಸುವ ಹೆಸರಿನಲ್ಲಿ, ಅರಿಶಿನ ಕುಂಕುಮ ಕಾರ್ಯಕ್ರಮಕ್ಕಾಗಿ ಅಥವಾ ಆರೋಗ್ಯ ಶಿಬಿರದ ಹೆಸರಿನಲ್ಲಿ ಮಹಿಳೆಯರನ್ನು ಸೇರಿಸಿ ಅಲ್ಲಿ ಮಹಿಳೆಯರ ರಕ್ತದ ಮಾದರಿಗಳನ್ನು ಪಡೆಯಲಾಗುತ್ತದೆ. ಅವರ ಹೆಸರು, ಆಧಾರ ಕಾರ್ಡ್ ನಂಬರ್ ಹಾಗೂ ಇತರ ವಿವರಗಳನ್ನು ಪಡೆಯಲಾಗುತ್ತದೆ. ಮಾನವಂತ ಮನೆಯ ಹೆಣ್ಣು ಮಕ್ಕಳನ್ನು, ಪ್ರತಿಷ್ಠಿತ ಮನೆತನದ ಹೆಣ್ಣು ಮಕ್ಕಳ ಹೆಸರನ್ನು ಸೆಕ್ಸ್ ವರ್ಕರ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಅವರ ಸಹಿಯನ್ನು ಫೋರ್ಜರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಒಂದೇ ರಕ್ತದ ಮಾದರಿಗಳನ್ನು ಐದಾರು ಜನರ ಹೆಸರಿನಲ್ಲಿ ಸೇರಿಸಿ ಕಳಿಸಲಾಗುತ್ತದೆ. ಸರ್ಕಾರದಿಂದ ಪೂರೈಕೆಯಾಗುವ ಕಾಂಡೋಂಗಳನ್ನು ಜನರಿಗೆ ತಲುಪಿಸುವುದಿಲ್ಲ ಎಂದು ದೂರಿದರು.
ಡಬ್ಲುಎಚ್‌ಆರ್ ಆರ್‌ಕೆ ಫೌಂಡೇಷನ್‌ನ ಜಿಲ್ಲಾ ಮಹಿಳಾ ಅಧ್ಯಕ್ಷೆ ಅರ್ಚನಾ ನಾಯಕ ಮಾತನಾಡಿ, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯೆಯರನ್ನು ಹಿಡಿದುಕೊಂಡು ಜಿಲ್ಲೆಯ ಮಾನವಂತ ಹೆಣ್ಣು ಮಕ್ಕಳ ಜೀವನ ಹಾಳು ಮಾಡುವ ಕಾರ್ಯ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಽಕಾರಿ ಅವರಿಗೆ ದೂರು ನೀಡಲಾಗಿದೆ. ಲಾಯರ್ ನೋಟಿಸ್ ಕಳಿಸಲಾಗಿದೆ. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು.
ಮಹಿಳಾ ಕ್ರಾಂತಿ ಸಂಘಟನೆಯ ಉದ್ಯೋಗಿಗಳಾದ ಫಾತಿಮಾ ಸಿದ್ದಿ, ತುಕಾರಾಂ, ರುಝಾ ಭಾನು, ರೋಜಿ ಫರ್ನಾಂಡಿಸ್ ಇತರರು ಮಾತನಾಡಿದರು. ಡಬ್ಲುಎಚ್‌ಆರ್ ಆರ್‌ಕೆ ಫೌಂಡೇಷನ್‌ನ ಜಯಪ್ರಕಾಶ ನಾಯಕ, ಮಂಜುನಾಥ ದುರ್ಗಾ ನಾಯ್ಕ, ಶ್ರೀಧರ ವಿ.ನಾಯ್ಕ, ಶ್ರೀನಿವಾಸ ಮಾಸ್ತಪ್ಪ ನಾಯ್ಕ, ಎಂ.ಎಂ.ನಾಯ್ಕ, ಮಾಲಿನಿ ನಾಯ್ಕ, ತೆರೆಸಾ ಅಂತೋನಿ ಡಿಸೋಜಾ, ಮೀನಾಕ್ಷಿ ಹೆಬ್ಬಾಳ ಸುದ್ದಿಗೋಷ್ಠಿಯಲ್ಲಿದ್ದರು.

ಸಿಬ್ಬಂದಿ ಹೆಸರಲ್ಲೂ ಮೋಸ

ಸಂಸ್ಥೆಗೆ 6 ತಿಂಗಳಿಗೊಮ್ಮೆ ಸರ್ಕಾರದಿಂದ ಸುಮಾರು ೧೩ ಲಕ್ಷ ರೂ. ಅನುದಾನ ಬರುತ್ತದೆ. ಅದನ್ನು ಕಚೇರಿ ನಿರ್ವಹಣೆ ಹಾಗೂ ಸಿಬ್ಬಂದಿ ವೇತನಕ್ಕೆ ಬಳಸಬೇಕು. ಸಂಸ್ಥೆಯಲ್ಲಿ 37 ಉದ್ಯೋಗಿಗಳಿದ್ದಾರೆ ಎಂದು ಸಹಿ ಹಾಕಲಾಗುತ್ತದೆ. ಆದರೆ, ವಾಸ್ತವದಲ್ಲಿ 10 ಉದ್ಯೋಗಿಗಳೂ ಇಲ್ಲ. ಇಲ್ಲದವರ ಹೆಸರಲ್ಲಿ ವೇತನ ಪಡೆದು, ಹಣ ಲೂಟಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಲು ಹೋದ ಉದ್ಯೋಗಿಗಳಿಗೆ ಬೆದರಿಕೆ ಹಾಕಲಾಗುತ್ತದೆ. ನಮ್ಮ ಹಲವು ಉದ್ಯೋಗಿಗಳಿಗೆ 4 ರಿಂದ 5 ತಿಂಗಳ ವೇತನ ಪಾವತಿ ಮಾಡದೇ ಸತಾಯಿಸಲಾಗುತ್ತಿದೆ ಎಂದು ಸೌಮ್ಯಾ ರಾವ್ ಅಳಲು ತೋಡಿಕೊಂಡರು.

ಮಹಿಳಾ ಕ್ರಾಂತಿ ಸಂಘಟನೆ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯಿಂದ ನೇರವಾಗಿ ಆಯ್ಕೆಯಾಗಿದೆ. ಮೇಲ್ವಿಚಾರಣೆ ಮಾತ್ರ ನಮ್ಮ ಜವಾಬ್ದಾರಿ. ಸಂಸ್ಥೆಯ ಮಾಜಿ ಸಿಬ್ಬಂದಿ ಈ ಹಿಂದೆಯೇ ದೂರಿದ್ದು, ನಾವು ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಕಂಡುಬಂದ ಹಲವು ಆರೋಪಗಳ ಪಟ್ಟಿ ಮಾಡಿ 2 ತಿಂಗಳ ಹಿಂದೆಯೇ ರಾಜ್ಯ ಕಚೇರಿಗೆ ವರದಿ ಕಳಿಸಿದ್ದೇವೆ. ಅವರು ಹೇಳಿದ ವಿಳಾಸಗಳಲ್ಲಿ ಕಚೇರಿ ಇಲ್ಲ. ದಾಖಲೆ ತೋರಿಸುವಷ್ಟು ಸಿಬ್ಬಂದಿ ಇಲ್ಲ ಮುಂತಾದ ಹಲವು ಲೋಪಗಳು ಕಂಡಿದ್ದರಿಂದ ನಾವು ಈ ಆರ್ಥಿಕ ವರ್ಷಕ್ಕೆ ಅವರಿಗೆ ಎನ್‌ಒಸಿ ನೀಡಿಲ್ಲ. ಈ ವರ್ಷ ಮಹಿಳಾ ಕ್ರಾಂತಿ ಸಂಸ್ಥೆಗೆ ಯಾವುದೇ ಅನುದಾನ ಕೂಡ ಬಿಡುಗಡೆಯಾಗಿಲ್ಲ.ಡಾ.ಹರ್ಷಡಿಎಪಿಸಿಯು, ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net