

ಬಾಗಲಕೋಟೆ: ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ವೈಷ್ಣೋದೇವಿ ಕ್ರಿಯೇಷನ್ಸ್ ವತಿಯಿಂದ ಸೆ.೫ ರಂದು ಸಿದ್ದೇಶ್ವರ ಶ್ರೀ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ನಿರ್ಮಾಪಕ ಹಾಗೂ ಶಬರೀಶ ವಿಶಿಷ್ಠಚೇತನರ ಸಂಸ್ಥೆಯ ಮುಖ್ಯಸ್ಥ ಘನಶ್ಯಾಂ ಭಾಂಡಗೆ ಘೋಷಣೆ ಮಾಡಿದರು.
ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಪ್ರತಿವರ್ಷ ಒಬ್ಬರಿಗೆ ನೀಡಲು ನಿರ್ಧರಿಸಲಾಗಿದೆ. ಸಿದ್ದೇಶ್ವರ ಶ್ರೀಪ್ರಶಸ್ತಿ ಆಯ್ಕೆಗೆ ಒಂದು ಸಮಿತಿಯನ್ನು ಕೂಡ ರಚಿಸಲಾಗುವುದು. ಎಲ್ಲಿಯೂ ಕಪ್ಪು ಚುಕ್ಕೆ ಬರದಂತೆ ಸಮಾಜದಲ್ಲಿ ಸೇವೆ ಮಾಡುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜಮುಖಿ ಕೆಲಸ ಹಾಗೂ ಜನರ ಪರಿವರ್ತನೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವವರನ್ನು ಗುರುತಿಸಲಾಗುವುದು. ರಾಜ್ಯ ಹಾಗೂ ಹೊರರಾಜ್ಯದವರನ್ನು ಕೂಡ ಪ್ರಶಸ್ತಿಗೆ ಗಣನೆಯಲ್ಲಿ ತೆಗೆದುಕೊಳ್ಳಲಾಗುವುದು. ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಅಪ್ಪಗಳವರ ಹೆಸರಿಗೆ ಕಪ್ಪು ಚುಕ್ಕೆ ಬರದಂತೆ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ನೀಡುವ ಪದ್ಮಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ಪ್ರಶಸ್ತಿ ನೀಡಲಾಗುವುದು. ಸಿದ್ದೇಶ್ವರ ಶ್ರೀ ಪ್ರಶಸ್ತಿಯು ೧ ಲಕ್ಷ ರೂ. ಮತ್ತು ಬಿನ್ನಳೆ ಪತ್ರವನ್ನು ಹೊಂದಿರುತ್ತದೆ. ಪ್ರಶಸ್ತಿಯ ಮೊತ್ತ ನೋಡುವುದಕ್ಕಿಂತ ಜ್ಞಾನದಾಸೋಹಿ ಸಿದ್ದೇಶ್ವರ ಶ್ರೀಗಳ ಹೆಸರು ಅಜರಾಮರವಾಗಿ ಉಳಿಯಬೇಕು ಎಂದು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಅವರು ಹಾಕಿಕೊಟ್ಟ ಜೀವನದ ಪದ್ಧತಿಯನ್ನು ನಾನೂ ಅಳವಡಿಸಿಕೊಂಡಿದ್ದೇನೆ ಎಂದರು.
ಸೆ.೫ ರಂದು ಬಾಗಲಕೋಟೆಯಲ್ಲಿ ನಡೆಯುವ ಸಿದ್ದೇಶ್ವರ ಶ್ರೀ ಪ್ರಶಸ್ತಿಯ ದಿನದಂದು ಶ್ರೀಗಳಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಇನ್ನೂ ಅವರು ನೀಡಿದ ಪ್ರವಚನದ ತುನುಕುಗಳನ್ನು ಸಹ ಪ್ರದರ್ಶನ ಮಾಡಲಾಗುವುದು. ಒಟ್ಟಾರೆ ಸಿದ್ದೇಶ್ವರ ಶ್ರೀಗಳು ನಮ್ಮನ್ನು ಬಿಟ್ಟು ಹೋಗಿಲ್ಲ ಅವರು ನಮ್ಮಲ್ಲಿಯೇ ಇದ್ದಾರೆ ಎಂದು ಹೇಳಿದರು.
ಮುಖಂಡರಾದ ಸಿದ್ದು ಉದಿಪುಡಿ, ಉಮೇಶ ಬರಗುಂಡಿ, ಕಲ್ಮೇಶ ಕೋಟಿ, ಮೆಹಬೂಬ ತೊಣಶ್ಯಾಳ, ರಾಜು ಗೌಳಿ ಇದ್ದರು.