

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಮುಂದಾಗಿರುವ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ(ಸೆ.21) ಬೆಳಗ್ಗೆ 11.30ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣ ಮುಂಭಾಗದಲ್ಲಿ ಐಕ್ಯ ಹೋರಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್, ಕೈಗಾರಿಕೆ ಮತ್ತು ಐಡಿ ಕಾಯ್ದೆಗಳ ತಿದ್ದುಪಡಿಯಿಂದ ಅನ್ನ ನೀಡುವ ರೈತರಿಗೆ ಹಾಗೂ ಕಾರ್ಮಿಕರಿಗೆ ಮಾರಕವಾಗಲಿದೆ. ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆಗಳನ್ನು ಸದನದಲ್ಲಿ ತರಾತುರಿಯಲ್ಲಿ ಅಂಗೀಕಾರಕ್ಕೆ ಮಂಡನೆ ಮಾಡಲು ಸರ್ಕಾರಗಳು ಹೊರಟಿವೆ. ಕೂಡಲೇ ಈ ನಿರ್ಧಾರಿಂದ ಹಿಂದೆ ಸರಿಯುವಂತೆ ಒತ್ತಡ ತರಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೋರಾಟಕ್ಕೆ ದಲಿತ, ಕಾರ್ಮಿಕ ಮತ್ತು ಪ್ರಗತಿಪರ ಸೇರಿ 27 ಸಂಘಟನೆಗಳು ಬೆಂಬಲ ನೀಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಈ ಬಾರಿ ವಿನೂತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಪರ್ಯಾಯ ಅಧಿವೇಶನ, ಸಂವಾದ, ಜಾಥಾ, ಪಂಜಿನ ಮೆರವಣಿಗೆ ಮತ್ತಿತರರ ಕಾರ್ಯಕ್ರಮಗಳು ಇರಲಿವೆ. ಸೆ.23ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರ್ಯಾಯ ಅಧಿವೇಶನ ನಡೆಸಲಾಗುವುದು. ಈ ಕಾಯ್ದೆಗಳನ್ನು ಹಿಂಪಡೆದಿದ್ದರೆ ಶಾಶ್ವತ ಹೋರಾಟ ರೂಪಿಸಲಾಗುವುದು. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಕರೊನಾದಿಂದಾಗಿ 15 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಕಠಿಣ ಸಂದರ್ಭದಲ್ಲಿ ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವ ಕಾಯ್ದೆ ತರಲು ಸರ್ಕಾರಗಳು ಮುಂದಾಗಿರುವುದು ಸರಿಯಲ್ಲ. ಹೀಗಾಗಿ, ನ್ಯಾಯಕ್ಕಾಗಿ ರೈತರು ಜತೆಗೆ ಒಟ್ಟಿಗೆ ಹೋರಾಟ ಮಾಡಲು ಕೈ ಜೋಡಿಸಿದ್ದೇವೆ ಎಂದು ಹಿಂದ್ ಮಜದೂರ್ ಕಿಸಾನ್ ಪಂಚಾಯತ್ ಸಂಘದ ಮುಖ್ಯಸ್ಥ ಕಾಳಪ್ಪ ತಿಳಿಸಿದರು.