ಸೂಕ್ತ ತನಿಖೆಗೆ ಸಿಎಂಗೆ ಪತ್ರ

bkt-04-12
ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಇತ್ತೀಚಿಗೆ ಮಾರಣಾಂತಿಕ ಹಲ್ಲೆ ನಡೆದು ಸದ್ಯ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಸೋಮವಾರ ಕಲಬುರಗಿ ವಿಭಾಗದ ತಿಂಥಣಿಯ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Published on

ಬಾಗಲಕೋಟೆ: ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಇತ್ತೀಚಿಗೆ ನಡೆದಿದ್ದ ಮಾರಣಾಂತಿಕ ಹಲ್ಲೆ ಹಿನ್ನಲೆಯಲ್ಲಿ ಸೋಮವಾರ ಹೆಗಡೆ ಚಿಕಿತ್ಸೆ ಪಡೆಯುತ್ತಿರುವ ಬಾಗಲಕೋಟೆ ವಾಸನದ ಖಾಸಗಿ ಆಸ್ಪತ್ರೆಗೆ ಕಲಬುರಗಿ ವಿಭಾಗದ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಭೇಟಿ ಮಾಡಿ ಆರೊಗ್ಯ ವಿಚಾರಿಸಿದರು.

ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದ ಸ್ವಾಮೀಜಿ ಕೆಲವೊತ್ತು ಯಲ್ಲಪ್ಪ ಹೆಗಡೆ ಅವರೊಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರನ್ನು ಹೊರಗೆ ಕಳುಹಿಸಿ ಯಲ್ಲಪ್ಪ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದರು.
ಆರೋಗ್ಯ ವಿಚಾರಣೆ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಸ್ವಾಮೀಜಿ, ಯಲ್ಲಪ್ಪ ಹೆಗಡೆ ಮೇಲೆ ಆಗಿರುವ ಹಲ್ಲೆ ಯಾವೊದೋ ವ್ಯವಹಾರ ಹಾಗೂ ವೈಯಕ್ತಿಕ ಕಾರಣದಿಂದ ಆಗಿರುವ ದಾಳಿ ಅಲ್ಲ. ಇದು ರಾಜಕೀಯ ದ್ವೇಷಕ್ಕಾಗಿ ಮಾಡಿರುವ ಹಲ್ಲೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಯಲ್ಲಪ್ಪ ಅವರು ರೈತ ಹಾಗೂ ಜನಸಾಮಾನ್ಯರ ಪರ ಹೋರಾಟ ಮಾಡುವ ವ್ಯಕ್ತಿ. ಹೀಗಾಗಿ ರಾಜಕೀಯ ಕಾರಣಕ್ಕಾಗಿ ಅವರ ಮೇಲೆ ದಾಳಿ ಮಾಡಿದ್ದಾರೆ. ಇಂಥ ದ್ವೇಷದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವುದು ಅನ್ಯಾಯ ಹಾಗೂ ಅಸಂವಿಧಾನಿಕವಾಗಿದೆ. ಘಟನೆ ಹಿಂದೆ ಪ್ರಭಾವಿಗಳ ಒತ್ತಡ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಾನು ಶ್ರೀಮಠದಿಂದ ಮುಖ್ಯಮಂತ್ರಿಗಳು, ಗೃಹಸಚಿವರು ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಿದ್ದೇನೆ. ಇಂಥ ಘಟನೆಗಳು ಎಲ್ಲೂ ಕೂಡ ಆಗಬಾರದು. ಸಿದ್ದಾಂತಗಳ ಬೇಧ ಇದ್ದರೆ ಅದನ್ನು ಸಿದ್ದಾಂತಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು. ಈ ರೀತಿ ರಾಜಕೀಯ ದ್ವೇಷ ಸರಿಯಲ್ಲ ಎಂದು ತಿಳಿಸಿದ ಸ್ವಾಮೀಜಿ, ಘಟನೆಯ ಹಿಂದೆ ಯಾರು ಇದ್ದರೆ ಎಂದು ಯಲ್ಲಪ್ಪ ನನಗೆ ಹೇಳಿಲ್ಲ. ಆದರೆ, ಪ್ರಭಾವಿಗಳು ಇದ್ದಾರೆಂದು ಕಾಣಿಸುತ್ತದೆ. ಹೀಗಾಗಿಯೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ಈ ವೇಳೆ ಕುರುಬ ಸಮಾಜದ ಮುಖಂಡ ಡಿ.ಬಿ.ಸಿದ್ದಾಪುರ, ಹನಮಂತ ರಾಕುಂಪಿ, ಮಲ್ಲಪ್ಪ ವಡಗೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net