

ಬಾಗಲಕೋಟೆ: ಸುಸ್ಥಿರ ಅಭಿವೃದ್ಧಿ ಗುರಿಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕಾದರೆ ಸಂಪನ್ಮೂಲಗಳ ಕ್ರೂಢೀಕರಣ ಅವಶ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಎನ್.ಕೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಜಿಲ್ಲಾ ಅಂಕಿ ಸಂಖ್ಯೆ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಂಖ್ಯಿಕ ಪಿತಾಮಹ ಪ್ರೊ.ಪಿ.ಸಿ.ಮಹಾಲನೋಬೀಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ನೈಜವಾಗಿ ತಲುಪಿದರೆ ಆಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಯಶ್ವಿಯಾಗುತ್ತವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಜೊತೆಗೆ ಇನ್ನಷ್ಟು ಗುರಿಗಳನ್ನು ಸೃಜನೆ ಮಾಡಿದರೆ ಇನ್ನು ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ವಿ.ದಿಕ್ಷಿತ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಸೂಚ್ಯಂಕಗಳ ಚೌಕಟ್ಟನ್ನು ರಾಜ್ಯ ಸೂಚ್ಯಕಗಳ ಚೌಕಟ್ಟಿನೊಂದಿಗೆ ಜೋಡಣೆ ಮಾಡುವುದು ಬಹು ಮುಖ್ಯವಾಗಿದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಪಿ.ಸುಂಕದ ಮಾತನಾಡಿ, ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯನ್ನು ಆಚರಿಸುವ ಉದ್ದೇಶ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಅಂಕಿ ಅಂಶಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವುದು ಹಾಗೂ ದೇಶದ ಅಭಿವೃದ್ಧಿಯಲ್ಲಿ ಅಂಕಿ ಅಂಶಗಳು ಹೇಗೆ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಅಲ್ಲದೆ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜೀವನ ಚರಿತ್ರೆ ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಸಾಂಖ್ಯಿಕ ಅಧಿಕಾರಿ ಎನ್.ವೈ.ಘಟ್ಟನೂರ ಮಾತನಾಡಿದರು. ಗುಳೇದಗುಡ್ಡದ ತಾ.ಪಂ ಸಹಾಯಕ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ತಾಲೂಕಾ ಯೋಜನಾಧಿಕಾರಿ ಅಸೋದಿ, ಜಿಲ್ಲಾ ಅಂಕಿ ಸಂಖ್ಯೆ ಇಲಾಖೇಯ ಸಹಾಯಕ ನಿರ್ದೇಶಕ ಎಂ.ಡಿ. ಮಕ್ತೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಸವರಾಜ ತೆಗ್ಗಿ ಸ್ವಾಗತಿಸಿದರು. ಎಸ್.ವಿ.ಮಠದ ವಂದಿಸಿದರು. ಶೇಖರ ಅಂಗಡಿ ಮತ್ತು ಆಶಾ ಮಲಕನ್ನವರ ನಿರೂಪಿಸಿದರು.