

ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ, ಮಾವಿನಹಳ್ಳಿಗಳಲ್ಲಿ ಮೊಹರಂ ಕತ್ತಲ ರಾತ್ರಿ ಕೆಂಡ ತುಳಿವ ಸಮಯದಲ್ಲಿ, ಮುಜಾವರು ಬುಧವಾರ ಬೆಳಗಿನ ಜಾವ ಕಾರಣಿಕ ನುಡಿದರು.
ಇದನ್ನೂ ಓದಿ: ಭಾವೈಕ್ಯತೆ ಸಾರುವ ಮುಜಾವರ್ಗಳಿಗೆ ಸನ್ಮಾನ
ಸುಗ್ಗೇನಹಳ್ಳಿಯ ಮುಜಾವರ ರಫೀಕ್ ಮೂರು ಹೇಳಿಕೆ ನೀಡಿದ್ದು, ಮೊದಲನೆಯದು ಕೆಂಪು ಕುದುರೆ ಬಿಳಿ ಕುದುರೆ ಹಿಂದಕ್ಕೆ ಮುಂದಕ್ಕೆ ಆಕಾಶಕ್ಕೆ ಹಾರಿತು, ಎರಡನೆಯದು ದೈವದ ಮಳೆ, ಮೂರನೆಯದು ದುಡಿದವರಿಗೆ ಫಲ ಎಂದರು. ರೈತಾಪಿ ವರ್ಗದಲ್ಲಿ ಕಾರಣಿಕ ಕುರಿತು ಚರ್ಚೆಯಾಗುತ್ತಿದೆ.
ಮೆಣಸಿನಕಾಯಿ ಸೇರಿ ಕೆಂಪು ಬಣ್ಣದ ಧಾನ್ಯ, ಬಿಳಿ ಕುದುರೆ ಪ್ರತೀಕವಾಗಿ ಹತ್ತಿ, ಭತ್ತ, ಅಕ್ಕಿ ದರ ಏರು ಇಳಿತ ಆಗಬಹುದು. ಕೆಲವರು ಹತ್ತಿ, ಭತ್ತ ಬೆಲೆ ಕುಸಿಯಲಿದೆ ಎಂದೂ, ದೈವದ ಮಳೆ ಎಂದರೆ ಮಳೆ ಅನಿಶ್ಚಿತತೆ, ಯಾವಾಗಲಾದರೂ ಬರಬಹುದು.
ದುಡಿದವರಿಗೆ ಫಲ ಎಂದರೇ ನ್ಯಾಯ, ನೀತಿಯಿಂದ ದುಡಿದಂತೆ ಫಲ ಎನ್ನುವ ಅರ್ಥ ಗ್ರಾಮದಲ್ಲಿ ಹರಿದಾಡುತ್ತಿದೆ. ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ, ಪ್ರಮುಖರಾದ ಮೌಲಾಸಾಬ್, ಹೊನ್ನೂರಸಾಬ್, ಎನ್.ತಿಪ್ಪಯ್ಯ, ವಿ.ಹನುಮಯ್ಯ ಇತರರಿದ್ದರು.
ಮಾವಿನಹಳ್ಳಿ ಕಾರಣಿಕ: ಮಾವಿನಹಳ್ಳಿಯಲ್ಲಿ ಸಿದ್ಧಪ್ಪ ತಾತ ಮಾನವ ಜನ್ಮ ಅರಿತು ನಡೆಯಬೇಕು, ಕೆಂಪು ಕುದುರೆ ಗಗನಕ್ಕೆ ಹಾರಿತು, ಬಿಳಿ ಕುದುರೆ ಮಂಡಿ ಊರಿತು ಎಂದು ಕಾರಣಿಕ ನುಡಿದರು. ಇನ್ನೊಬ್ಬ ಮುಜಾವರ ಹೊನ್ನೂರುಸ್ವಾಮಿ ಕಾರಣಿಕ ನುಡಿದು ಊರು ತುಂಬಾ ಹಾಲುಪತ್ರಿ ಕಟ್ಟಿ ಎಂದರು.
ಮೆಣಸಿನಕಾಯಿಗೆ ದರ ಸಿಗಲಿದ್ದು, ಹತ್ತಿಗೆ ದರ ಕಡಿಮೆಯಾಗಲಿದೆ ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ. ಗ್ರಾಮದ ಒಳಿತಿಗಾಗಿ, ರೋಗ ರುಜಿನಿ, ದುಷ್ಟಶಕ್ತಿ ಗ್ರಾಮ ಪ್ರವೇಶಿಸಬಾರದೆಂದು ಹಾಲುಪತ್ರಿಯನ್ನು ಗ್ರಾಮದ ಗಡಿ ಭಾಗಗಳಲ್ಲಿ ಕಟ್ಟಲಾಯಿತು. ರೈತರು ಯಾವ ಬೆಳೆ ಬೆಳೆಯಬೇಕೆಂದು ನಿರ್ಧರಿಸಲು ಕಾರಣಿಕ ಹೇಳಿಕೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.