ಸೀಲ್​ಡೌನ್ ಪ್ರದೇಶದಲ್ಲಿ ಓಡಾಟಕ್ಕೆ ಅವಕಾಶ ನೀಡಬೇಡಿ

8-hvr-01
Published on

ಹಾವೇರಿ: ಕರೊನಾ ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ಸೀಲ್​ಡೌನ್ ಆಗಿರುವ ಸವಣೂರ ಪಟ್ಟಣ ರಾಜೀವಗಾಂಧಿ ನಗರ ಹಾಗೂ ಎಸ್​ಎಂ ಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಬೇಡಿ. ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸವಣೂರ ಸೀಲ್​ಡೌನ್ ಪ್ರದೇಶದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಗುರುವಾರ ಸಂಜೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ಶುಕ್ರವಾರದಿಂದ ಉಚಿತವಾಗಿ ಹಾಲು ಪೂರೈಸುವಂತೆ ಸೂಚಿಸಿದರು.

ಈಗಾಗಲೇ ಉಚಿತವಾಗಿ ಆಹಾರ ಕಿಟ್​ಗಳನ್ನು ವಿತರಿಸಲಾಗಿದೆ. ಈ ಪ್ರದೇಶದಲ್ಲಿ ಬಯಲು ಬಹಿರ್ದೆಸೆಗೆ ನಿರ್ಬಂಧ ಹಾಕಬೇಕು. ಶೌಚಾಗೃಹ ವ್ಯವಸ್ಥೆ ಇಲ್ಲದವರಿಗೆ ಪುರಸಭೆಯಿಂದ ತಾತ್ಕಾಲಿಕ ಶೌಚಗೃಹ ವ್ಯವಸ್ಥೆಯನ್ನು ಕಲ್ಪಿಸಿ ಎಂದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ಮನೆಮನೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಸೀಲ್​ಡೌನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ. ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಖಾದರಭಾಗ್, ಸುಣಗಾರ ಓಣಿ, ಕಮಲಬಂಗಡಿ ಓಣಿಗಳಲ್ಲಿ ಮೆಲಾಥಿನ್ ಸಿಂಪಡಣೆ ಮಾಡಲಾಗಿದೆ. ಅಗ್ನಿಶಾಮಕ ವಾಹನದಿಂದ ಕಂಟೇನ್ಮೆಂಟ್ ಜೋನ್​ನಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. 394 ಆಹಾರ ಕಿಟ್ ವಿತರಿಸಲಾಗಿದೆ ಎಂದರು.

ಆಶಾ ಕಾರ್ಯಕರ್ತೆಯರೊಂದಿಗೆ ಎಸ್​ಎಂ ಕೃಷ್ಣ ನಗರದಲ್ಲಿನ 374ಮನೆಗಳಿಗೆ ಭೇಟಿ ನೀಡಿ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ದೇಹದ ಉಷ್ಣಾಂಶವನ್ನು ಥರ್ಮಲ್ ಸ್ಕಾ್ಯನರ್​ದಿಂದ ಪರೀಕ್ಷಿಸಲಾಗಿದೆ. ಇದರಲ್ಲಿ ಏಳು ಜನರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಆಗಮಿಸಿದವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ 10ತಂಡಗಳನ್ನು ರಚಿಸಿ ದಿನಕ್ಕೆ 1,068ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. 8ಜನ ಜ್ವರದಿಂದ ಹಾಗೂ 6ಜನ ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿರುವವರನ್ನು ಚಿಕಿತ್ಸೆಗಾಗಿ ಜ್ವರ ತಪಾಸಣೆ ಘಟಕಕ್ಕೆ ಕಳುಹಿಸಲಾಗಿದೆ ಎಂದರು.

ವಿಡಿಯೋ ಸಂವಾದದಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ದಿಲೀಪ್ ಶಶಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ತಹಸೀಲ್ದಾರ್ ಶಂಕರ ಜಿ.ಎಸ್., ಇತರರಿದ್ದರು.

ಕರೊನಾ ಸೋಂಕಿತ ಮನೆಯಿಂದ 100ಮೀಟರ್ ಸುತ್ತಲೂ ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಿ ಅದರ ಸುತ್ತಲೂ ಚೆಕ್​ಪೋಸ್ಟ್​ಗಳನ್ನು ನಿರ್ವಿುಸಿ ಸಾರ್ವಜನಿಕರ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಾಸ್ ಹೊಂದಿದ ವಾಹನಗಳಿಗೆ ಮಾತ್ರ ಸವಣೂರ ಪಟ್ಟಣದ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಡಿಎಸ್​ಪಿ ಉಸ್ತುವಾರಿಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. | ಅನ್ನಪೂರ್ಣ ಮುದಕಮ್ಮನವರ, ಉಪವಿಭಾಗಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net