

ಬಾಗಲಕೋಟೆ: ದೇಶದಲ್ಲಿ ಪ್ರಸಿದ್ದಿ ಪಡೆದಿರುವ ಬಾಗಲಕೋಟೆಯ ರಂಗು ರಂಗಿನ ಹೋಳಿ ಬಣ್ಣದಾಟ ಇಂದಿನಿಂದ ಮೂರು ದಿನಗಳ ಕಾಳ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಲಿದೆ.
ಇಡೀ ನಗರವೇ ಬಣ್ಣದಲ್ಲಿ ಮಿಂದೇಳಲಿದ್ದು, ಮಧ್ಯಾಹ್ನದ ಬಳಿಕ ಬಣ್ಣದ ಬಂಡಿಗಳು ಕಣ್ಣಿಗೆ ಹಬ್ಬದ ಕಳೆಯನ್ನು ತುಂಬಿಕೊಡಲಿವೆ. ಈ ಐತಿಹಾಸಿಕ ಹಬ್ಬದ ಆಚರಣೆಗೆ ಈಗಾಗಲೇ ಬಾಗಲಕೋಟೆ ಸಂಪೂರ್ಣ ಸಜ್ಜುಗೊಂಡಿದೆ.
ಇದೇ ವೇಳೆ ಹಬ್ಬದ ಸಂಭ್ರಮಕ್ಕೆ ಕಿಂಚಿತ್ತು ತೊಂದರೆ ಆಗಬಾರದು. ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎನ್ನುವ ಕಾರಣಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಕಟ್ಟೆಚ್ಚರವನ್ನು ವಹಿಸಿದೆ. ಹಬ್ಬವನ್ನು ಸಂಭ್ರಮಿಸಿ. ಅದರೆ, ಮತ್ತೊಬ್ಬರ ಭಾವನೆ ಕೆರಳಿಸುವ ರೀತಿ ಆಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಜಯಪ್ರಕಾಶ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುಂಜಾಗೃತ ಕ್ರಮವಾಗಿ ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ವಿಶೇಷವಾಗಿ ೮೬ ಸ್ಥಳಗಳಲ್ಲಿ ಹೈರೆಸಲೂಶನ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಈ ಮೊದಲು ಇದ್ದ ಸಿಸಿ ಕ್ಯಾಮರಾಗಳ ಜೊತೆಗೆ ಹೆಚ್ಚುವರಿಯಾಗಿ ಹಾಕಿದ್ದಾರೆ. ಬೈಕ್ ನಂಬರ ಪ್ಲೇಟ್ ಹಾಗೂ ವ್ಯಕ್ತಿಗಳ ಮುಖವೂ ಸಹ ಸ್ಪಷ್ಟವಾಗಿ ಪತ್ತೆ ಹಚ್ಚುವ ಸಾಮರ್ಥ್ಯ ಇರುವ ಕ್ಯಾಮರಾಗಳು ಇದಾಗಿವೆ.
ಇನ್ನು ಭದ್ರತೆಗಾಗಿ ಇಬ್ಬರು ಡಿಎಸ್ಪಿ, ಆರು ಜನ ಸಿಪಿಐ, ೧೧ ಜನ ಪಿಎಸ್‌ಐ ಸೇರಿ ೫೦೦ಕ್ಕೂ ಅಧಿಕ ಪೊಲೀಸರು ಹಾಗೂ ಬಾಗಲಕೋಟೆ ನಗರಕ್ಕೆಂದೆ ೩ ಕೆಎಸ್‌ಆರ್‌ಪಿ ಹಾಗೂ ೫ ಡಿಆರ್‌ತುಕಡಿಗಳನ್ನು ಸಹ ನಿಯೋಜಿಸಲಾಗಿದೆ. ಪ್ರತಿ ಚಲನವಲನವನ್ನು ಗಮನಿಸುತ್ತಿದ್ದು, ಜನರು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಿ. ಸಂಭ್ರಮ, ಸಡಗರ ಇರಲಿ. ಆದರೆ, ಯಾರಾದರೂ ಕಾನೂನು ಉಲ್ಲಂಘಿಸಿದರೆ ಗುಂಡಾ ಕಾಯ್ದೆ ಅಡಿ ಬಂಽಸಿಲಾಗುವುದು. ಅವಶ್ಯಕತೆ ಬಿದ್ದರೆ ಅಂತವರನ್ನು ಗಡಿಪಾರಿಗೂ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಯಾರಾದರೂ ಕಿಡಿಗೇಡಿತನ ನಡೆಸಿದರೆ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರುಗಿಸುವುದಾಗಿ ಎಸ್ಪಿ ಜಯ ಪ್ರಕಾಶ ಎಚ್ಚರಿಸಿದ್ದಾರೆ.