

ವಿಜಯವಾಣಿ ಸುದ್ದಿಜಾಲ ಕಾರವಾರ: ಎಡಬಿಡದ ರೈಲು ಸಂಚಾರದಿಂದ ತುಂಬಿರುತ್ತಿದ್ದ ಕೊಂಕಣ ರೈಲು ಮಾರ್ಗವೀಗ ಖಾಲಿ, ಖಾಲಿ… ಹಳಿಗಳು ಹಾವಿನಂತೆ ಉದ್ದಕ್ಕೆ ಬಿದ್ದುಕೊಂಡಿವೆ. ಆದರೆ, ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಖಾಲಿ ಕುಳಿತಿಲ್ಲ.
ರೈಲು ಪ್ರಾರಂಭವಾದ ನಂತರ 26 ವರ್ಷಗಳಲ್ಲಿ ಒಮ್ಮೆಯೂ ಹಳಿ ಇಷ್ಟು ಖಾಲಿ ಸಿಕ್ಕಿರಲಿಲ್ಲ. ಲಾಕ್ ಡೌನ್ನಿಂದ ಪ್ರಯಾಣಿಕರ ರೈಲುಗಳ ಓಡಾವಿಲ್ಲದ ಕಾರಣ ರೈಲ್ವೆ ಇಲಾಖೆ ಮಳೆಗಾಲ ಪೂರ್ವದ ಹಾಗೂ ಇತರ ತುರ್ತು ನಿರ್ವಹಣೆ ಕಾರ್ಯಗಳನ್ನು ಮಾಡಿಕೊಳ್ಳುತ್ತಿದೆ.
ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ, ಭಟ್ಕಳ ಹಾಗೂ ಉಡುಪಿಯಲ್ಲಿ ರೈಲ್ವೆ ಮೆಂಟೆನೆನ್ಸ್ ವೆಹಿಕಲ್ (ಆರ್ಎಂವಿ) ಇದೆ. ಇದು ಪ್ರತಿನಿತ್ಯ ಎರಡು ಓಡಾಟ ನಡೆಸುತ್ತಿದೆ. ಸಾಮಗ್ರಿಗಳನ್ನು, ಇಂಜಿನಿಯರಿಂಗ್ ಸಿಬ್ಬಂದಿಯನ್ನು ಸಾಗಿಸುವ ಕಾರ್ಯ ಮಾಡುತ್ತಿದೆ.
ಗ್ಯಾಂಗ್ವುನ್ಗಳು ಹಳಿಗಳ ಕ್ಲಿಪ್ಪಿಂಗ್ ಬಿಗಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಗುಡ್ಡ ಕುಸಿಯುವ ಪ್ರದೇಶಗಳನ್ನು ಗುರುತಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕಾರ್ಯವಾಗುತ್ತಿದೆ.
ಎಷ್ಟು ರೈಲು?: ಕೊಂಕಣ ರೈಲು ಮಾರ್ಗದಲ್ಲಿ ಸರಾಸರಿ 26 ಪ್ರಯಾಣಿಕರ ರೈಲುಗಳು ನಿತ್ಯ ಓಡಾಡುತ್ತಿದ್ದವು. ಅಲ್ಲದೆ, ಸರಕು ರೈಲುಗಳ ಓಡಾಟ ಸೇರಿ ಶೇ. 140ರಷ್ಟು ಸಂಚಾರ ದಟ್ಟಣೆ ಇತ್ತು. ಸಣ್ಣ ನಿರ್ವಹಣೆ ಕೆಲಸ ಮಾಡಬೇಕು ಎಂದರೂ ರೈಲುಗಳನ್ನು ನಿಲ್ಲಿಸಬೇಕಿತ್ತು. ಇಡೀ ಮಾರ್ಗದ ಮೇಲೆ ಭಾರಿ ಒತ್ತಡ ಇರುವುದರಿಂದ ನಿರ್ವಹಣೆಯೇ ವಿಭಾಗದ ಇಂಜಿನಿಯರ್ಗಳಿಗೆ ದೊಡ್ಡ ಸವಾಲಾಗಿತ್ತು. ಈಗ ಇಡೀ ಮಾರ್ಗ ಖಾಲಿ ಸಿಕ್ಕಿದ್ದರಿಂದ ಗುಣಮಟ್ಟದ ನಿರ್ವಹಣೆ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕೊಂಕಣ ರೈಲ್ವೆ ಇಂಜಿನಿಯರ್ಗಳು.
ಗೂಡ್ಸ್ ರೈಲು ಓಡಾಟ: ಕೊಂಕಣ ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲುಗಳ ಓಡಾಟ ಇಲ್ಲದಿದ್ದರೂ ಗೂಡ್ಸ್ ರೈಲುಗಳ ಓಡಾಟ, ಲಾರಿಗಳನ್ನು ಹೊತ್ತೊಯ್ಯುವ ರೋರೋ ಸೇವೆ ಮುಂದುವರಿದಿದೆ. ಆಹಾರ ಧಾನ್ಯ ಹಣ್ಣು ಮುಂತಾದವುಗಳನ್ನು ಪೂರೈಸಲು ರೈಲ್ವೆ ನೆರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಪಾಳಿಯ ಮೇಲೆ ಮಾರ್ಗದಲ್ಲಿ ನಿರ್ವಹಣೆ ಕೆಲಸ ಮಾಡಲಾಗುತ್ತಿದೆ. ಹೆಚ್ಚುವರಿ ಕಾರ್ವಿುಕರನ್ನು ಬಳಸಿಕೊಳ್ಳುವ ಸಂದರ್ಭವಿದ್ದರೆ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುತ್ತಿದ್ದೇವೆ. | ಸುಧಾ ಕೃಷ್ಣಮೂರ್ತಿ ಕೊಂಕಣ ರೈಲ್ವೆ ಪಿಆರ್ಒ