ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ

7 mlv 1
Published on

ಮಳವಳ್ಳಿ: ಆರ್ಥಿಕವಾಗಿ ಹಿಂದುಳಿದಿರುವ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವುದರಿಂದ ವೈದ್ಯರು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಸೂಚಿಸಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಬಡ ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಗಳೇ ಆಸರೆ. ಇಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ವೈದ್ಯರು ಹಾಗೂ ಸಿಬ್ಬಂದಿ ಸೇವಾ ಮನೋಭಾವ ಬೆಳೆಸಿಕೊಂಡು ಜನ ಸಾಮಾನ್ಯರಿಗೆ ಸ್ಪಂದಿಸಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ರೋಗಿಗಳ ದೃಷ್ಟಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವವರು ನಿಜವಾದ ದೇವಮಾನರಾಗುತ್ತೀರಿ ಎಂದರು.


ರಕ್ತ ಪರೀಕ್ಷಾಲಯದಲ್ಲಿರುವ ಉಪಕರಣಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಪಯೋಗಿಸುವಂತೆ ಸೂಚಿಸಿದ ಅವರು, ಹೆರಿಗೆ ವಿಭಾಗದಲ್ಲಿನ ಉತ್ತಮ ವ್ಯವಸ್ಥೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.


ನಂತರ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಪುರುಷ /ಮಹಿಳೆ ವಾರ್ಡ್, ಡಯಾಲಿಸಿಸ್, ಶಸ್ತ್ರ ಚಿಕಿತ್ಸೆ , ಐಸಿಯು ವಿಭಾಗಗಳನ್ನು ಪರಿಶೀಲಿಸಿದರು. ನಂತರ ಹೊರ ಹಾಗೂ ಒಳರೋಗಿಗಳ ಕುಂದುಕೊರತೆಗಳನ್ನು ಆಲಿಸಿದರು. ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಸಿವಿಲ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಆಸ್ಪತ್ರೆಯನ್ನು ಐಎಸ್‌ಒ/ ಎನ್‌ಎಬಿಎಚ್ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಹದೇವನಾಯಕ ಅವರಿಗೆ ಸಲಹೆ ನೀಡಿದರು.


ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ವೈದ್ಯರಾದ ಡಾ.ವಿನೀತ್, ಡಾ.ದಿವ್ಯಾ, ಡಾ.ವಿಜಯ್, ಆಯುಷ್ ವೈದ್ಯಾಧಿಕಾರಿ ಡಾ.ಯೋಗೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net