

ಬಾಗಲಕೋಟೆ: ವೈಷ್ಣೋದೇವಿ ಕ್ರಿಯೇಷನ್ ವತಿಯಿಂದ ವಿಜಯಪುರದ ಜ್ಞಾನಯೋಗಾಶ್ರಮದ ಪರ ಪೂಜ್ಯ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ನೀಡಲು ಘೋಷಣೆ ಮಾಡಲಾಗಿತ್ತು. ಅನೇಕ ಹಿರಿಯರು, ನಾಡಿನ ಚಿಂತಕರು, ಮುತ್ಸದ್ದಿಗಳು ಶ್ರೀಗಳ ಆಶಯಗಳಿಗೆ ಪೂರಕವಾಗಿ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರಿಂದ ಅನೇಕ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚಲನಚಿತ್ರ ನಿರ್ಮಾಪಕ ಘನಶ್ಯಾಮ ಭಾಂಡಗೆ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಗಾಗಿ ಮೀಸಲಿರಿಸಿದ್ದ ೧ ಲಕ್ಷ ರೂ. ಹಣದಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಆಶಿಸಿದ್ದೇವೆ. ವೈಷ್ಣವಿ ಕ್ರಿಯೇಷನ್ಸ್ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಬಾಗಲಕೋಟೆ ನಗರದ ಪೌರಕಾರ್ಮಿಕರ ಮಕ್ಕಳಿಗೆ ೨೫ ಸಾವಿರ ರೂ.ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ ಎಂದರು.
೫೦ ಸಾವಿರ ರೂ. ಸಿದ್ಧೇಶ್ವರ ಶ್ರೀಗಳ ಪ್ರವಚನಗಳ ಪುಸ್ತಕ ಹಾಗೂ ಅಂದಾಜು ೨೦೦ರ ವರೆಗೆ ಪೆನ್ ಡ್ರೈವ ಜಿಲ್ಲೆಯಾದ್ಯಂತ ಹಂಚಬೇಕು ಎಂದು ತೀರ್ಮಾನಿಸಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ವಾಪಸ್ಸಾದ ಮಾಜಿ ಸೈನಿಕರಿಗೆ ಹಾಗೂ ಅವರ ಪ್ರತಿಭಾವಂತ ಮಕ್ಕಳಿಗೆ ೨೫ ಸಾವಿರ ರೂ.ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅಂಗವಿಕಲರ ಮಕ್ಕಳಿಗೆ ೨೫ ಸಾವಿರ ರೂ.ನೀಡಲು ನಿರ್ಧರಿಸಲಾಗಿದೆ. ಪತ್ರಕರ್ತರ ಮಕ್ಕಳ ಪ್ರತಿಭಾಪುರಸ್ಕಾರಕ್ಕೆ ೨೫ ಸಾವಿರ ರೂ. ನೀಡಲಾಗುವುದು ಅಂತ ಸ್ಥಳದಲ್ಲಿ ಕಾನಿಪ ಜಿಲ್ಲಾ ಘಟಕಕ್ಕೆ ಹಸ್ತಾಂತರ ಮಾಡಿದರು.
ಮುಖಂಡರಾದ ಉಮೇಶ ಬರಗುಂಡಿ, ಸಿದ್ದು ಉದಪುಡಿ, ಕಲ್ಮೇಶ ಕೋಟಿ, ಮಹಿಬೂಬ ತೊಣಶ್ಯಾಳ, ತಿಪ್ಪಣ್ಣ ಗೌಳಿ ಉಪಸ್ಥಿತರಿದ್ದರು.