

ಬಾಗಲಕೋಟೆ: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಇವತ್ತು ತ್ರಿವೇಣಿ ಸಂಗಮ ಹಾಗೂ ಅಣ್ಣ ಬಸವಣ್ಣ ಐಕ್ಯ ಸ್ಥಳವಾಗಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು.
ಸಿದ್ದೇಶ್ವರ ಶ್ರೀಗಳ ಆಶೆಯದಂತೆ ಚಿತಾ ಭಸ್ಮವನ್ನು ಮೂರು ನದಿಗಳ ಸಂಗಮವಾಗಿರುವ ಕೂಡಲಸಂಗಮ ದಲ್ಲಿ ವಿಸರ್ಜನೆ ಕಾರ್ಯ ನಡೆಯಿತು. ಬೋಟ್ ನಲ್ಲಿ ಶ್ರೀಗಳ ಭಾವಚಿತ್ರ, ಚಿತಾಭಸ್ಮ ತುಂಬಿದ ಮಡಿಕೆಯನ್ನು ಇಟ್ಟುಕೊಂಡು, ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಇತರ ಸ್ವಾಮೀಜಿಗಳು ಹಾಗೂ ವಿಜಯಪುರ ಜಿಲ್ಲಾಧಿಕಾರಿ ವಿಜಯಮಾಂತೇಶ್ ದಾನಮ್ಮನವರ ಅವರು ನದಿ ಮಧ್ಯ ಭಾಗಕ್ಕೆ ತೆರಳಿ ಶ್ರೀಗಳ ಚಿತಾಭಸ್ಮವನ್ನು ವಿಸರ್ಜನೆ ಮಾಡಿದರು.
ಚಿತಾಭಸ್ಮ ವಿಸರ್ಜನೆ ಮಾಡುವುದನ್ನು ನೋಡೋವುದಕ್ಕಾಗಿ ಕೂಡಲಸಂಗಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಚಿತಾಭಸ್ಮ ವಿಸರ್ಜನೆಗೆ ವಿಜಯಪುರದಿಂದ ಅಂದಾಜು 800 ವಾಹನಗಳು ಹಾಗೂ ವಿವಿಧೆಡೆ ಸೇರಿ ಒಂದು ಸಾವಿರಕ್ಕೂ ಅಧಿಕ ವಾಹನಗಳ ಮೂಲಕ ಭಕ್ತರು ಆಗಮಿಸಿದ್ದರು.
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ, ಚಿತಾಭಸ್ಮ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಕೃಷ್ಣ, ಘಟಪ್ರಭಾ ಮತ್ತು ಮಲ್ಲಪ್ರಭಾ ನದಿ ಹೀಗೆ ಮೂರು ನದಿಗಳ ಸಂಗಮ ಆಗಿದ್ದರಿಂದ ಇಲ್ಲೆ ಸಿದ್ದೇಶ್ವರ ಶ್ರೀಗಳ ಚಿತಾ ಭಸ್ಮ ಬಿಡಲು ಜ್ಞಾನ ಯೋಗಾಶ್ರಮದಿಂದ ನಿರ್ಧರಿಸಿ,ಇಂದು ಬೆಳಗಿನ ಜಾವ 7 ಗಂಟೆಗೆ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಇಂದು ಚಿತಾಭಸ್ಮ ಬಿಡಲು ನಿರ್ಧಾರ ಮಾಡಿದ್ದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕಡೆಯಿಂದ ಭಕ್ತರು ಬೆಳಗಿನ ಜಾವದಿಂದಲೇ ಕೂಡಲಸಂಗಮಕ್ಕೆ ಆಗಮಿಸುತ್ತಿದ್ದರು. ನಂತರ ಸಂಗಮನಾಥ ದೇವಾಲಯ ಬಳಿ ಚಿತಾಭಸ್ಮ ತೆಗೆದುಕೊಂಡು ಬಂದ ಶ್ರೀಗಳು ಬೋಟ್ ದಲ್ಲಿ ಹತ್ತಿಕೊಂಡು, ನದಿಯ ಮಧ್ಯೆ ಭಾಗದಲ್ಲಿ ತೆರಳಿ ಮಡಿಕೆಯಲ್ಲಿ ತಂದಿರುವ ಚಿತಾಭಸ್ಮ ವನ್ನು ಸುರಿದರು. ಇದಕ್ಕೂ ಮುನ್ನ ನದಿ ದಡದಲ್ಲಿ ಸಿದ್ದೇಶ್ವರ ಶ್ರಿಗಳ ಭಾವಚಿತ್ರ ಇಟ್ಟು ಪೂಜೆ ಮಾಡಲಾಯಿತು.
ಬಳಿಕ ಮಾತನಾಡಿದ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಅಪ್ಪೋರು ಕೂಡಲಸಂಗಮದ ಬಗ್ಗೆ ಬಹಳ ಅಭಿಮಾನ ಹೊಂದಿದ್ದರು. ಕೃಷ್ಣೆಯ ನೀರು ವಿಜಯಪುರಕ್ಕೆ ಬರಬೇಕೆಂದು
ಎಂ. ಬಿ.ಪಾಟಿಲ್ ಅವರ ಮೂಲಕ ನೀರಾವರಿ ಮಾಡಿಸಿದ್ದರು. ಇದು ಜಗಜ್ಯೋತಿ ಬಸವಣ್ಣ ಐಕ್ಯವಾದ ಸ್ಥಳ, ಇಲ್ಲಿ ಜ್ಞಾನಜ್ಯೋತಿ ಅಪ್ಪೋರ ಚಿತಾಭಸ್ಮ ಬಿಡಲಾಯಿತು.
ಚಿತಾಭಸ್ಮ ವಿಸರ್ಜನೆ ಎಲ್ಲ ಅಧಿಕಾರಿಗಳು ಬಹಳ ಅನುಕೂಲ ಮಾಡಿದ್ದಾರೆ. ಈಗ ಗೋಕರ್ಣಕ್ಕೆ ಹೋಗುತ್ತೇವೆ. ಗೋಕರ್ಣದ ಸಾಗರದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುತ್ತೇವೆ.
ಎಲ್ಲವೂ ಅವರ ಇಚ್ಛೆಯಂತೆ ನಡೆದಿದೆ ಎಂದರು.
ವಿಜಯಪುರ ಜ್ಞಾನ ಯೋಗಾಶ್ರಮಸ ಬಸವಲಿಂಗ ಸ್ಚಾಮೀಜಿ, ವಿಜಯಪುರ ಜಿಲ್ಲಾಧಿಕಾರಿ ವಿಜಯಮಾಂತೇಶ ದಾನಮ್ಮನವರ, ಕೂಡಲ ಸಂಗಮದ ಬಸವಜಯಮೃತ್ಯುಂಜಯ ಸ್ಚಾಮೀಜಿ ಇತರರು ಇದ್ದರು.