ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿ

Oplus_16777216
Oplus_16777216
Published on

ಸಿದ್ದಾಪುರ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಿದ್ದಾಪುರ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಿರುಸಿನ ಗಾಳಿ, ಮಳೆಯಿಂದಾಗಿ ಮನೆಗಳ ಮೇಲೆ ಹಾಗೂ ಅಲ್ಲಲ್ಲಿ ಮರಗಳು ಬಿದ್ದು ಭಾರಿ ನಷ್ಟ ಸಂಭವಿಸಿದೆ.

ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಾಡಗ ಬಾಣಂಗಾಲ ಗ್ರಾಮದ ಜನತಾ ಕಾಲನಿ ನಿವಾಸಿ ಸೀನಪ್ಪ ಅವರ ಮನೆ ಮೇಲೆ ಸೋಮವಾರ ಬೆಳಗ್ಗೆ ಭಾರಿ ಗಾಳಿಯಿಂದ ಮರ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ ಹಾಗೂ ಬಾಡಗ ಬಾಣಂಗಾಲ ಗ್ರಾಮದ ಗಿರಿಜನ ಕಾಲನಿ ಅಂಗವಿಕಲ ಅನಿಲ್ ಅವರ ಮನೆ ಅರ್ಧಭಾಗ ಕುಸಿದು ಬಿದಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಸಿದ್ದಾಪುರ-ಮೈಸೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಬೆಳಗ್ಗೆ ಭಾರಿ ಗಾತ್ರದ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪಾಲಿಬೆಟ್ಟದಲ್ಲಿ ಇರುವ ಆರ್ಕಾಡ್ ಬಾಬಾ ದರ್ಗಾ ತಡೆಗೋಡೆ ಸೋಮವಾರ ಕುಸಿದು ಬಿದಿದ್ದು ಅಪಾರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಲ್ದಾರೆ, ಚೆನ್ನಯ್ಯನಕೋಟೆ, ಸಿದ್ದಾಪುರ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಈ ಭಾಗದಲ್ಲಿ ಕಳೆದ ಮೂರು ದಿನದಿಂದ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ,ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ಭಾಗದಲ್ಲಿ ಇರುವ ಕಾವೇರಿ ನದಿಯಿಂದ ರಸ್ತೆಗೆ 3 ಅಡಿ ನೀರು ಬಂದಿದ್ದು, ಪ್ರವಾಹದ ಪರಿಸ್ಥಿತಿ ಎದುರಾಗಿದೆ.

ಸ್ಥಳಕ್ಕೆ ಅಮ್ಮತ್ತಿ ವಲಯ ಕಂದಾಯ ನಿರೀಕ್ಷಕ ಅನಿಲ್ ಕುಮಾರ್, ಮೋನಪ್ಪ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net