ಸಿದ್ದರಾಮಯ್ಯಗೆ ಬಹಿಷ್ಕಾರ- ಅಧಿವೇಶನ ವೇಳೆ ಪ್ರತಿಭಟನೆ

bkt-10-11
ಹಲಕುರ್ಕಿ ಗ್ರಾಮದಲ್ಲಿ ರೈತರ ಜಮೀನು ಸ್ವಾಧೀನ ವಿರೋಧಿಸಿ ಶನಿವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ರೈತರು ಸುದ್ದಿಗೋಷ್ಠಿ ನಡೆಸಿದರು. ಪ್ರಕಾಶ ನಾಯ್ಕರ, ಪೂಜ್ಯ ಷಡಕ್ಷರಿ ಸ್ವಾಮೀಜಿ, ರುದ್ರಗೌಡ ಪಾಟೀಲ, ಶಿವಯೋಗಿ ಉಂಡಿ ಮತ್ತಿತರರು ಇದ್ದರು.
Published on

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ಜಮೀನು ಸ್ವಾಧೀನ ಪ್ರಕ್ರಿಯೆ ವಿರೋಽಸಿ ಕಳೆದ ೮೧ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹಲಕುರ್ಕಿ ಗ್ರಾಮದ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ರೈತರ ವಿರೋಧವನ್ನು ಲೆಕ್ಕಿಸದೇ ಕೈಗಾರಿಕೆ ಸಚಿವ, ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಅವರು ಜಮೀನು ಕೊಡಲು ಅನೇಕ ರೈತರು ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳುವ ಮೂಲಕ ಪ್ರತಿಭಟನೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಇದೆಲ್ಲವೂ ಸಂಪೂರ್ಣ ಸುಳ್ಳು ಎಂದು ಹಲಕುರ್ಕಿ ಗ್ರಾಮಸ್ಥರು ಶನಿವಾರ ಬಾಗಲಕೋಟೆ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಆಡಳಿತ ಪಕ್ಷ ಬಿಜೆಪಿ ರೈತರ ಜಮೀನು ವಶಪಡಿಸಿಕೊಳ್ಳುತ್ತಿರುವುದರಿಂದ ಆ ಪಕ್ಷದವರು ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಆದರೆ, ವಿಪಕ್ಷವಾಗಿ ಕಾಂಗ್ರೆಸ್ ಮೌನ ವಹಿಸಿರುವುದು ನಮಗೆ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಹಲಕುರ್ಕಿ ಗ್ರಾಮ ಬೀಳಗಿ ವಿಧಾನಸಭೆ ಕ್ಷೇತ್ರಕ್ಕೆ ಬಂದರೂ ಬಾದಾಮಿ ತಾಲೂಕಿನ ಗ್ರಾಮ. ಬಾದಾಮಿ ಶಾಸಕ ಸಿದ್ದರಾಮಯ್ಯ ಬರೀ ಕ್ಷೇತ್ರಕ್ಕೆ ಸೀಮಿತವಲ್ಲ. ತಮ್ಮ ಕ್ಷೇತ್ರದ ಪಕ್ಕದ ಊರಿನ ರೈತರು ೮೧ ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಅವರ ಬಗ್ಗೆಯೂ ನಮಗೆ ಹಲವು ಅನುಮಾನಗಳು ಬರುತ್ತಿವೆ. ಹೀಗಾಗಿ ಡಿ. ೧೨ ರಂದು ನಮ್ಮ ಗ್ರಾಪಂ ವ್ಯಾಪ್ತಿಗೆ ಬರುವ ಬಾದಾಮಿ ಕ್ಷೇತ್ರದ ಚಿಕ್ಕಮುಚಳಗುಡ್ಡ ಗ್ರಾಮದಲ್ಲಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲು ಬರುತ್ತಿರುವ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಎಂದು ಪ್ರಕಾಶ ನಾಯ್ಕರ ಹೇಳಿದರು.
ಈಗಾಗಲೇ ನಾವು ಜಮೀನು ಕೊಡಲ್ಲ ಎಂದು ಕೆಐಎಡಿಬಿಗೆ ಸ್ಪಷ್ಟಪಡಿಸಿದ್ದೇವೆ. ರೈತರ ವಿರೋಧ ಇದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಅದಾಗ್ಯೂ ಸಚಿವ ಮುರುಗೇಶ ನಿರಾಣಿ ಅವರು ಮಾತ್ರ ಜಮೀನು ಕೊಡಲು ರೈತರ ಒಪ್ಪಿಗೆ ಇದೆ ಎನ್ನುವುದು ಸಂಪೂರ್ಣ ಸುಳ್ಳು. ಯಾವ ರೈತರು ಒಪ್ಪಿಗೆ ನೀಡಿದ್ದಾರೆಂದು ಅವರು ಪಟ್ಟಿ ಬಿಡುಗಡೆ ಮಾಡಲಿ. ಯಾವ ರೈತರು ವಿರೋಧ ಮಾಡುತ್ತಿದ್ದಾರೆ. ನಾವು ಈಗಾಗಲೇ ಕೆಐಎಡಿಬಿ ನೋಟಿಸ್‌ಗೆ ಉತ್ತರಿಸಿದಾರೆ ಎಂದು ಪ್ರಕಾಶ ನಾಯ್ಕರ ತಿಳಿಸಿದರು.
ನಮಗೆ ವಿಮಾನ ನಿಲ್ದಾಣವೂ ಬೇಡ, ಕೈಗಾರಿಕೆಗಳು ಬೇಡ. ನಮ್ಮ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ಈಡೇರಿಸಲಿ. ಇದೇ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರು ನಮ್ಮೂರಿಗೆ ಕೆರೂರ ಏತ ನೀರಾವರಿಗೆ ಸೇರಿಸಿ ಅಡಿಗಲ್ಲ ಹಾಕಿದ್ದಾರೆ. ಈಗ ಕೈಗಾರಿಕೆ ಮಾಡುತ್ತೇವೆ ಎಂದು ಕೈಗಾರಿಕೆ ಸಚಿವರು ಹೇಳುತ್ತಾರೆ. ಇದರಲ್ಲಿ ಯಾರನ್ನ ನಂಬುವುದು, ಯಾರನ್ನು ಬಿಡುವುದು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಬದುಕಿಗೆ ಆಸರೆ ಆಗಿರುವ ಜಮೀನು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಜಮೀನು ಕಳೆದುಕೊಳ್ಳುವ ರೈತರು ಡಿ. ೧೯ ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ವೇಳೆ ಹತ್ತು ದಿನಗಳ ಕಾಲ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ. ಈಗಲೂ ಕಾಲ ಮಿಂಚಿಲ್ಲ. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ರೈತರ ಜಮೀನು ಸ್ವಾಧೀನವನ್ನು ಕೈಬಿಡಬೇಕು ಎಂದು ಹಲಕುರ್ಕಿ ಗ್ರಾಮದ ದಿಗಂಬರೇಶ್ವರ ಮಠದ ಷಡಕ್ಷರಿ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರುದ್ರಗೌಡ ಪಾಟೀಲ, ಶಿವಯೋಗಿ ಉಂಡಿ, ಯಂಕಣ್ಣ ದಳವಾಯಿ, ಹನಮಂತ ಹಾಳಕೇರಿ, ರಂಗಪ್ಪ ಬಂಡಿವಡ್ಡರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net