ಸಿದ್ದರಾಮಯ್ಯ ಭಯೋತ್ಪಾದಕರ ರಕ್ಷಕ ! : ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆರೋಪ

cpt78
Published on

ಚನ್ನಪಟ್ಟಣ: ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಹಾಗೂ ಭಯೋತ್ಪಾದಕರ ರಕ್ಷಕ ಎನ್ನಬಹುದು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಿಂದ ತುಂಬಿದೆ. ಎಲ್ಲ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಈ ಸರ್ಕಾರ ಬಲಿ ಪಡೆಯುತ್ತಿದೆ. ಎಐಸಿಸಿಗೆ ರಾಜ್ಯ ಸರ್ಕಾರ ಎಟಿಎಂ ಆಗಿದೆ. ರಾಹುಲ್ ಗಾಂಧಿ ಸೇರಿ ದೆಹಲಿ ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಬಂದಾಗೆಲ್ಲ ಇಲ್ಲಿನ ಹಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರೈತಪರ, ನಾಡಪರ ಹೋರಾಟ ಮಾಡಿದವರ ಮೇಲಿನ ಮೊಕದ್ದಮೆಗಳು ಹಾಗೆಯೇ ಇವೆ. ಆದರೆ, ಭಯೋತ್ಪಾದಕರ ಮೇಲಿನ ಮೊಕದ್ದಮೆಗಳನ್ನು ಈ ಸರ್ಕಾರ ವಾಪಸ್ ಪಡೆದಿದೆ. ಭಯೋತ್ಪಾದಕರಿಗೆ ಇದು ನಮ್ಮ ಸರ್ಕಾರ ಎಂಬ ಮಟ್ಟಿಗೆ ಧೈರ್ಯ ಬಂದಿದೆ. ಈ ಮೂಲಕ ಸಿಎಂ ಭ್ರಷ್ಟಾಚಾರದ ರಕ್ಷಕ ಹಾಗೂ ಭಯೋತ್ಪಾದಕರ ರಕ್ಷಕ ಎನ್ನಬಹುದು ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರಕ್ಕೆ ಮುಂದೆ ಬರಲಿರುವ ಚನ್ನಪಟ್ಟಣದ ಉಪಚುನಾವಣೆಯಲ್ಲಿ ತಾಲೂಕಿನ ಜನತೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಬಂದಾಗ ಮಾತ್ರ ದೇವರು ಹಾಗೂ ಜನರ ನೆನಪಾಗುತ್ತದೆ. ಇಲ್ಲವಾದರೆ, ಯಾವುದೂ ಅವರ ನೆನಪಿಗೆ ಬರುವುದಿಲ್ಲ. ಉಪಚುನಾವಣೆ ಹಿನ್ನೆಲೆಯಲ್ಲಿ ಈಗ ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ ಎಂದು ಬರುತ್ತಿದ್ದಾರೆ.

ತಾಲೂಕಿನ ಅಭಿವೃದ್ಧಿಯಲ್ಲಿ ನಮ್ಮ ಮೈತ್ರಿ ಪಕ್ಷಗಳ ಕೊಡುಗೆ ಅಪಾರವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ, ತಾಲೂಕು ಅಧ್ಯಕ್ಷ ತೂಬಿನಕೆರೆ ರಾಜು, ಜೆಡಿಎಸ್ ಅಧ್ಯಕ್ಷ ಜಯಮುತ್ತು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net