

ಬಾಗಲಕೋಟೆ: ಕ್ಷೇತ್ರದ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಬೇಕು. ೫೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅವರನ್ನು ಗೆಲ್ಲಿಸಲಾಗುವುದು ಎಂದು ಕ್ಷೇತ್ರದ ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ.
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೈ ಪಕ್ಷದ ಮುಖಂಡರಾದ ಹನುಮಂತಗೌಡ ಯಕ್ಕಪ್ಪನವರ, ಮುಚಖಂಡಯ್ಯ ಹಂಗರಗಿ, ಹೊಳಬಸು ಶೆಟ್ಟರ, ೨೦೧೮ರ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಸಾಕಷ್ಟು ಪೈಪೋಟಿ ನಡುವೆಯೂ ಅಲ್ಪ ಮತಗಳಿಂದ ಆಯ್ಕೆಯಾಗಿದ್ದರು. ಈ ಸಾರಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದಲ್ಲಿ ಅತ್ಯಧಿಕ ಮತಗಳಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುತ್ತೇವೆ. ಈ ಬಗ್ಗೆ ಯಾವುದೇ ಸಂಶಯವೇ ಬೇಡ ಎಂದು ಅಭಯ ನೀಡಿದರು.
ಸಿದ್ದರಾಮಯ್ಯ ಮುಂದಿನ ಸಾರಿ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿವೆ. ಈಗಾಗಲೇ ೫ ವರ್ಷದಲ್ಲಿ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ೩೫೦೦ ಕೋಟಿ ರೂ. ಅನುದಾನ ತಂದಿದ್ದಾರೆ. ಐತಿಹಾಸಿಕ ಬಾದಾಮಿ ಮತಕ್ಷೇತ್ರದ ಅಭಿವೃದ್ಧಿಗೆ ಹೊಸ ದಿಕ್ಕು ಸಿಕ್ಕಿದೆ. ಮತ್ತೊಮ್ಮೆ ಸ್ಪರ್ಧೆ ಮಾಡಿ ಮುಖ್ಯಮಂತ್ರಿಯಾದಲ್ಲಿ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ರೈತರು, ಮಹಿಳೆಯರು, ಸಾರ್ವಜನಿಕರಿಂದ ಜಾತಿ, ಮತ, ಪಕ್ಷ, ಧರ್ಮ ಮೀರಿ ಬೆಂಬಲವಿದ್ದು, ಎಲ್ಲರೂ ಮತ ನೀಡಲಿದ್ದಾರೆ. ಕೇವಲ ನಾಮಪತ್ರ ಸಲ್ಲಿಕೆ ಮಾಡಿ ಹೋದರೆ ಸಾಕು. ಕಾರ್ಯಕರ್ತರು, ಮುಖಂಡರು ಪ್ರಚಾರ ಮಾಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಕತ್ತು ಇದ್ದರೆ ಸಿದ್ದರಾಮಯ್ಯ ಎದುರು ಬಂದು ಸ್ಪರ್ಧೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲಗೆ ಸಿದ್ದು ಅಭಿಮಾನಿಗಳು ಸವಾಲು ಹಾಕಿದರು.
ಮುಚಖಂಡಯ್ಯ ಹಂಗರಗಿ ಮಾತನಾಡಿ, ನೀವು ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಆದಷ್ಟು ಬೇಗ ಬಾದಾಮಿಯಿಂದಲೇ ಸ್ಪಽðಸ್ತೇನೆ ಎಂದು ಹೇಳಿಕೆ ನೀಡಬೇಕು. ಒಂದು ವೇಳೆ ಬಾದಾಮಿ ಕ್ಷೇತ್ರ ತೊರೆಯಲು ಮುಂದಾದರೆ ಇಲ್ಲಿನ ಜನತೆ ಜೊತೆಗೆ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಲಾಗುವುದು. ಬಾದಾಮಿಯಿಂದ ಸ್ಪಽðಸದಿದ್ದರೆ ನಿಮ್ಮ ಮನೆ(ಸಿದ್ದರಾಮಯ್ಯ ಮನೆ) ಎದುರು ವಿಷ ಕುಡಿಯುತ್ತೇವೆ. ಚಾಮುಂಡಿ ತಾಯಿ ನಿಮ್ಮ ಕೈಬಿಟ್ಟಾಗ ಬನಶಂಕರಿ ತಾಯಿ ನಿಮಗೆ ಆಶೀರ್ವಾದ ಮಾಡಿದ್ದಾಳೆ. ಬನಶಂಕರಿ ದೇವಿ ನಿಮ್ಮನ್ನು ಮತ್ತೆ ಸಿಎಂ ಮಾಡ್ತಾಳೆ. ನೀವು ಯಾವುದೇ ವಿಚಾರ ಮಾಡದೆ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು. ಬಾದಾಮಿ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಿದರೆ ಜನರಿಗೆ ದ್ರೋಹ ಮಾಡಿದಂತಾಗುತ್ತೆ. ಕಷ್ಟಕಾಲದಲ್ಲಿ ಕೈಹಿಡಿದ ನಮ್ಮನ್ನು ಬಿಟ್ಟು ಹೋದರು ಎನ್ನುವ ಅಪವಾದ ಬರುತ್ತೆ. ಬಾದಾಮಿಯಲ್ಲಿ ನೀವು ಗೆದ್ದು ಉತ್ತರ ಕರ್ನಾಟಕದ ಹುಲಿಯಾಗಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಆಪ್ತ ಹೊಳಬಸು ಶೆಟ್ಟರ ಮಾತನಾಡಿ, ಸಿದ್ದರಾಮಯ್ಯ ಸಾಹೇಬರಿಗೆ ಈಗಾಗಲೇ ವಿನಂತಿ ಮಾಡಿದ್ದೇವೆ. ಸಾಕಷ್ಟು ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಅವರ ಹೇಳಿಕೆ ಕ್ಷೇತ್ರದ ಜನರಿಗೆ ನೋವು ಆಗಿದೆ. ನೀವು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಬಾದಾಮಿಯಿಂದ ಬೆಂಗಳೂರುವರೆಗೆ ಬೈಕ್ ರ‍್ಯಾಲಿ ಮಾಡುತ್ತೇವೆ. ಮಹಿಳೆಯರು ಪ್ರತಿಭಟನೆ ನಡೆಸುತ್ತಾರೆ. ಪ್ರಸಂಗ ಬಂದರೆ ದೆಹಲಿ ಎಐಸಿಸಿ ಎದುರು ಪ್ರತಿಭಟನೆ ಮಾಡುತ್ತೇವೆ. ಎಐಸಿಸಿಯಿಂದಲೇ ನೀವು ಬಾದಾಮಿಯಿಂದ ಸ್ಪಽðಸುವಂತೆ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಡಲ್ಲ ಎಂದು ಹೇಳಿದರು.
ಮುಖಂಡರಾದ ಸಂಜಯ ಬರಗುಂಡಿ, ಎಂ.ಎಸ್.ಚಲವಾದಿ ಸೇರಿದಂತೆ ಇತರರು ಇದ್ದರು.