

ಬಾಗಲಕೋಟೆ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬುಧವಾರ ಜಿಲ್ಲೆಯಾದ್ಯಂತ ಮಳೆಯ ಜೊತೆಗೆ ಭಾರಿ ಪ್ರಮಾಣದಲ್ಲಿ ಸಿಡಿಲಿನ ಅಬ್ಬರ ಉಂಟಾಗಿದ್ದು, ಸಿಡಿಲಿನ ಹೊಡೆತಕ್ಕೆ ಓರ್ವ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಬುಧವಾರ ಮಧ್ಯಾಹ್ನದಿಂದಲೇ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಶುರುವಾಗಿದ್ದು, ಇದರ ಜೊತೆಗೆ ಸಿಡಿಲಿನ ಆರ್ಭಟವೂ ಜೋರಾಗಿತ್ತು. ಸಿಡಿಲು ಬಡಿದು ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದ ಕೃಷ್ಣಪ್ಪ ಗುಡದನ್ನವರ(೩೦) ಸಾವನ್ನಪ್ಪಿದ್ದಾರೆ.
ಹಾಗೆಯೇ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಮೇಕೆಗಳು ಸತ್ತಿವೆ. ಮಂಜಪ್ಪ ಕರಡಿ ಎನ್ನುವವರಿಗೆ ಸೇರಿದ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ.
ಇನ್ನು ಮಳೆ ಅಬ್ಬರದಿಂದಾಗಿ ಮುಧೋಳ ನಗರದ ಶಾರದ ಖಾಸಗಿ ಆಸ್ಪತ್ರೆ ಹಾಗೂ ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀರು ನುಗ್ಗಿದ್ದು, ರೋಗಿಗಳು ಪರದಾಡುವಂತಾಗಿದೆ. ಮುಧೋಳದ ಶಾರದಾ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮಳೆ ನೀರು ನುಗ್ಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಐವರು ರೋಗಿಗಳನ್ನು ಬೇರೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ
ಮಂಗಳವಾರ ರಾತ್ರಿ ಹಾಗೂ ಬುಧವಾರ ಸುರಿದು ಮಳೆಯಿಂದಾಗಿ ಜನಜೀವನಕ್ಕೆ ತೀವ್ರ ತೊಂದರೆ ಆಗಿದೆ. ಹುನಗುಂದ ಪಟ್ಟಣದಲ್ಲಿ ಕುಂಬಾರ ಓಣಿ ಹಾಗೂ ತರಕಾರಿ ಮಾರುಕಟ್ಟೆ ಜಲಾವೃತವಾಗಿತ್ತು. ತರಕಾರಿ ವ್ಯಾಪಾರಸ್ಥರು ತೀವ್ರ ಪರದಾಡುವಂತಾಯಿತು.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಾಗಪ್ಪ ಕಬಾಡದ ಎನ್ನುವವರ ಮನೆ ಮೇಲೆ ಬೀದಿ ವಿದ್ಯುತ್
ಕಂಬದ ತಂತಿ ಹರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಧಾರಕಾರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಮೂರು ದಿನಗಳಲ್ಲಿ ೫೦ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೆ ಒಳಗಾಗಿರುವ ವರದಿಯಾಗಿದೆ.