ಸಿಡಿಲಿಗೆ ಎತ್ತು ಬಲಿ

Published on

ಬಾಗಲಕೋಟೆ: ಸಿಡಿಲು, ಮಿಂಚುಗಳ ಸಹಿತ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಸಿಡಿಲಿಗೆ ಒಂದು ಎತ್ತು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ತಾಂಡಾದ 2 ರಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಬೆಳಗ್ಗೆ ವರೆಗೂ ಮುಂದುವರೆದಿತ್ತು. ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳ, ಕೆರೆ-ಕಟ್ಟೆಗಳಿಗೆ ಜೀವ ಕಳೆ ಬಂದಿವೆ. ಮಳೆಯಿಂದಾಗಿ ವಾತಾವರಣ ತಂಪೇರಿತು. ಸಿಡಿಲಿಗೆ ಕುಂದರಗಿ ತಾಂಡಾದ 2 ರಲ್ಲಿ ಶಂಕರ ನಿಂಗಪ್ಪ ಲಮಾಣಿ ಎನ್ನುವವರಿಗೆ ಸೇರಿದ ಎತ್ತು ರಾತ್ರಿ 11 ಗಂಟೆಗೆ ಮೃತಪಟ್ಟಿದೆ. ಬಾಗಲಕೋಟೆ, ಮುಧೋಳ, ಜಮಖಂಡಿ, ಬಾದಾಮಿ, ರಬಕವಿ-ಬನಹಟ್ಟಿ, ತೇರದಾಳ, ಹುನಗುಂದ, ಇಳಕಲ್ಲ, ಕೆರೂರ, ಕಲಾದಗಿ, ಕಮತಗಿ ಸೇರಿದಂತೆ ಎಲ್ಲೆಡೆ ಧಾರಾಕಾರ ಮಳೆಯಿಂದಾಗಿ ಈರುಳ್ಳಿ, ಹೆಸರು, ತೊಗರಿ ಬೆಳೆಗಾರರ ಹಳದಿ ನಂಜಾನು ರೋಗದ ಭೀತಿ ಎದುರಾಗಿದೆ. ಉಳಿದಂತೆ ಕಬ್ಬು, ಗೋವಿನ ಜೋಳ, ಜೋಳ ಬೆಳೆಗಾರರಿಗೆ ವರುಣ ದೇವನ ಕೃಪೆ ಹರ್ಷಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net