

ಮಳವಳ್ಳಿ: ತಾಲೂಕಿನ ಕಾವೇರಿ ನದಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಪೋರೈಕೆಗಾಗಿ ಸುರಂಗ ಮಾರ್ಗ ಕಾಮಗಾರಿಕ್ಕೆ ಸಿಡಿಮದ್ದು ಸಿಡಿಸಿದ ಪರಿಣಾಮ ವಿವಿಧ ಗ್ರಾಮಗಳಲ್ಲಿನ ನೂರಾರು ಮನೆಗಳು ಬಿರುಕು ಬಿಟ್ಟಿದ್ದು ಜನರು ಆತಂಕಗೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಲವೆಡೆಗೆ ಕುಡಿಯುವ ನೀರಿಗಾಗಿ ತಾಲೂಕಿನ ಗಡಿ ಭಾಗದ ಕಾವೇರಿ ನದಿಯಿಂದ ಸತ್ತೆಗಾಲ ಕುಡಿಯುವ ನೀರಿನ ಯೋಜನೆ ಮೂಲಕ ಕಾಮಗಾರಿ ಕೈಗೊಳ್ಳಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಪೂರೈಕೆಗೆ ಮೆಘಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಗುತ್ತಿಗೆ ಪಡೆದು ಸುರಂಗ ಕಾಮಗಾರಿ ನಡೆಸುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಲು ಸುರಂಗದಲ್ಲಿ ಸಿಡಿಮದ್ದು ಸಿಡಿಸುತ್ತಿರುವ ಪರಿಣಾಮ ಹತ್ತಾರು ಗ್ರಾಮಗಳಲ್ಲಿ ಹಲವು ಮನೆಗಳು ಬಿರುಕುಗೊಂಡು ಹಾನಿಯಾಗಿವೆ. ಅಲ್ಲದೆ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ತಾಲೂಕಿನ ಕೊಂಡದಮ್ಮನಪುರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳು ಬಹುಪಾಲು ಬಿರುಕುಗೊಂಡಿವೆ. ನೆಟ್ಕಲ್, ದಬ್ಬಳ್ಳಿ, ಬಸವನಪುರ, ಹಾಡ್ಲಿ, ಅಗಸನಪುರ, ನಂಜೇಗೌಡನದೊಡಿ, ಬಾಣಗಹಳ್ಳಿ ಗ್ರಾಮಗಳಲ್ಲೂ ಹಲವು ಮನೆಗಳು ಭೂಮಿ ಕಂಪನಕ್ಕೆ ಬಿರುಕು ಬಿಟ್ಟಿವೆ. ಸುರಂಗ ಕೊರೆಯಲು ನಿಯಮ ಉಲ್ಲಂಘಿಸಿ ಸಿಡಿಮದ್ದು ಬಳಸಲಾಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೊಂಡದಮ್ಮನ ಪುರ ಗ್ರಾಮದ ಕಾರ್ತಿಕ್ ದೂರಿದ್ದಾರೆ.
ಗುತ್ತಿಗೆ ಕಂಪನಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯಿಂದ ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕಂಪನಿ ನಿರ್ಲಕ್ಷೃದಿಂದ ವಿದ್ಯುತ್ ಅವಘಡಕ್ಕೆ ಸೆಸ್ಕ್ ನೌಕರನೊಬ್ಬ ಮೃತಪಟ್ಟಿದ್ದಾನೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.
ಮಳವಳ್ಳಿ ಶ್ರೀನಿವಾಸ್, ಕಾರ್ಯಾಧ್ಯಕ್ಷ, ಕರ್ನಾಟಕ ಜನಪರ ವೇದಿಕೆ