

ಹನೂರು: ತಾಲೂಕಿನ ಕೌದಳ್ಳಿ ಕುರಟ್ಟಿ ಹೊಸೂರು ಮಾರ್ಗದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬಳಿ ಸೋಮವಾರ ಕಿಡಿಗೇಡಿಗಳು ಅಡಗಿಸಿಟ್ಟಿದ್ದ ಸಿಡಿಮದ್ದಿಗೆ 3 ಹಸುಗಳ ಬಾಯಿ ಛಿದ್ರಗೊಂಡಿದ್ದು, ಈ ಬಗ್ಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುರಟ್ಟಿ ಹೊಸೂರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬೆಳಗ್ಗೆ ಕೌದಳ್ಳಿ ಗ್ರಾಮದ ರಾಮಪ್ಪ, ಮುರುಗೇಶ್ ಹಾಗೂ ಕೃಷ್ಣಯ್ಯ ಎಂಬುವರು ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಆಂಜನೇಯ ಸ್ವಾಮಿ ದೇಗುಲದ ಬಳಿ ಹಸುಗಳು ಮೇಯಲು ಬಾಯಿ ಹಾಕಿದಾಗ ಕಿಡಿಗೇಡಿಗಳು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಅಡಗಿಸಿಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು 3 ಹಸುಗಳ ಬಾಯಿ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.
ಕಳೆದ 2 ತಿಂಗಳ ಹಿಂದೆಯೂ ಇದೇ ಮಾರ್ಗದಲ್ಲಿ ಹಸುವೊಂದು ಕಿಡಿಗೇಡಿಗಳ ಈ ಕೃತ್ಯಕೆ ಬಲಿಯಾಗಿತ್ತು. ಜತೆಗೆ ಇತ್ತೀಚಿಗೆ ಹನೂರು ಸಮೀಪದ ಬೂದುಬಾಳು ಗ್ರಾಮದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಸ್ಥಳಕ್ಕೆ ಎಸ್ಪಿ ಡಾ. ಬಿ.ಟಿ ಕವಿತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ಸಿಡಿಮದ್ದು ಸಿಡಿತಕ್ಕೆ 3 ಹಸುಗಳ ಬಾಯಿ ಛಿದ್ರವಾಗಿರುವ ಬಗ್ಗೆ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಹಾಗೂ ಈ ದುಷ್ಕೃತ್ಯಕ್ಕೆ ಕಡಿವಾಣ ಹಾಕುವಂತೆ ಒತ್ತಾಯ ಕೇಳಿ ಬಂದಿದೆ.