ಸಿಐಡಿಗೆ ಬಾಗಲಕೋಟೆ ಐಡಿಬಿಐ ಬ್ಯಾಂಕ್ ಹಗರಣ !

bkt-22-11
ಬಾಗಲಕೋಟೆ ನಗರದಲ್ಲಿ ಇರುವ ಐಡಿಬಿಐ ಬ್ಯಾಂಕ್.
Published on

ಅಶೋಕ ಶೆಟ್ಟರ, ಬಾಗಲಕೋಟೆ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ವಾಲ್ಮೀಕಿ ನಿಗಮದ ಹಗರಣದ ಬೆನ್ನಲ್ಲೆ ಬೆಳಕಿಗೆ ಬಂದಿದ್ದ ಬಾಗಲಕೋಟೆ ನಗರದ ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಣ ಗುಳಂ ಮಾಡಿರುವ ಪ್ರಕರಣ ಇದೀಗ ನಿರೀಕ್ಷೆಯಂತೆ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ನಗರದ ಐಡಿಬಿಐ ಬ್ಯಾಂಕ್ ನಲ್ಲಿ ಇದ್ದ ವಿವಿಧ ಇಲಾಖೆಗಳು ತೆರೆದಿದ್ದ ಖಾತೆಗಳಿಂದ ಬ್ಯಾಂಕ್ ಸಿಬ್ಬಂದಿಯೇ ಶಾಮಿಲಾಗಿ ಹಣವನ್ನು ಬೇರೆಯವರು ಖಾತೆಗಳಿಗೆ ವರ್ಗಾವಣೆ ಮಾಡಿ ಹಣ ದೋಚುತ್ತ ಬಂದಿದ್ದರು. ಕಳೆದ ಮೂರು ವರ್ಷಗಳಿಂದ ಐದು ಇಲಾಖೆಗಳಿಗೆ ಸಂಬಂಧಪಟ್ಟಂತೆ ಒಟ್ಟು ೬೦೮೬೨೫೬೮ ರೂ.ಗಳನ್ನು ಚಂಸಿರುವುದು ಈ ವರೆಗೂ ಬಾಗಲಕೋಟೆ ಸಿಇಎನ್ ಪೊಲೀಸರು ನಡೆಸಿರುವ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಈ ವರೆಗೂ ಸಿಇಎನ್ ಪೊಲೀಸರು ನಡೆಸಿರುವ ತನಿಖೆಯಲ್ಲಿ ಒಟ್ಟು ೨೮ ಜನರನ್ನು ಬಂಽಸಿದ್ದು, ಅವರೆಲ್ಲರು ಸದ್ಯ ಜಾಮೀನು ಪಡೆದುಕೊಂಡು ಹೊರಗಡೆ ಇದ್ದಾರೆ. ಇದರಲ್ಲಿ ಕೆಲವರು ವಿವಿಧ ಇಲಾಖೆಗಳ ಹಣ ವಂಚನೆಯಲ್ಲಿ ಭಾಗಿ ಆಗಿರುವ ಆರೋಪದ ಮೇಲೆ ಅವರ ವಿರುದ್ಧ ಎರಡ್ಮೂರು ಕೇಸ್ ಗಳು ಇವೆ.

ಏನಿದು ಪ್ರಕರಣ…?
ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯಿಂದ ೯೪ ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ ಅವರು ತಮ್ಮ ಇಲಾಖೆಗಳ ಖಾತೆಗಳನ್ನು ಪರಿಶೀಲಿಸುವಂತೆ ಅಽಕಾರಿಗಳಿಗೆ ಸೂಚನೆ ನೀಡಿದ್ದರು.

ಹೀಗೆ ಖಾತೆಗಳ ಪರಿಶೀಲನೆ ವೇಳೆ ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾಽಕಾರಿಗಳ ಹೆಸರಿನಲ್ಲಿ ಇದ್ದ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಮೂರು ಖಾತೆಗಳಿಂದ ಐಡಿಬಿಐ ಬ್ಯಾಂಕ್ ನಲ್ಲಿ ೨.೪೭ ಕೋಟಿ ರೂ. ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಾಗ ಇದು ಬರೀ ಒಂದು ಇಲಾಖೆಯಲ್ಲಿ ನಡೆದಿದ್ದಲ್ಲ, ಬೇರೆ ಬೇರೆ ಇಲಾಖೆಗಳಲ್ಲೂ ನಡೆದಿರುವುದು ಬೆಳಕಿಗೆ ಬಂದಿತ್ತು. ತನಿಖೆ ಮುಂದುವರೆಸಿದಾಗ ಪ್ರವಾಸೋದ್ಯಮ ಇಲಾಖೆ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಹಣವನ್ನು ಬ್ಯಾಂಕ್ ಸಿಬ್ಬಂದಿ ಶಾಮಿಲಾಗಿ ದೋಚಿರುವುದು ಪತ್ತೆ ಆಗಿತ್ತು.

ಈ ವರೆಗೂ ೨೮ ಜನರ ಬಂಧನ :
ಸರ್ಕಾರದ ವಿವಿಧ ಇಲಾಖೆಗಳು ಐಡಿಬಿಐ ಬ್ಯಾಂಕ್ ನಲ್ಲಿ ತೆರೆದಿದ್ದ ಖಾತೆಗಳು ವಿವಿಧ ಯೋಜನೆಗಳಿಗೆ ಸಂಬಂಧ ಪಟ್ಟಂತ ಖಾತೆಗಳಲ್ಲಿ ಆ ಯೋಜನೆ ಮುಕ್ತಾಯವಾಗಿ ಖಾತೆಗಳ ವಹಿವಾಟು ಬಂದ್ ಆಗಿರುವುದನ್ನು ಗಮನಿಸಿ, ಆ ಖಾತೆಗಳಲ್ಲಿನ ಹಣವನ್ನು ಬ್ಯಾಂಕ್ ಅಽಕಾರಿಗಳು ಹಾಗೂ ಸಿಬ್ಬಂದಿ ಶಾಮಿಲಾಗಿ ತಮಗೆ ಆಪ್ತರಾಗಿರುವ ಖಾತೆಗಳಿಗೆ ವರ್ಗಾವಣೆ ಮಾಡಿ ಹಣ ದೋಚುವ ದಂಧೆಯನ್ನು ಶುರು ಹಚ್ಚಿಕೊಂಡಿದ್ದರು.
ಪ್ರಕರಣ ಬೆಳಕಿಗೆ ಬಂದು ಸಿಇಎನ್ ಪೊಲೀಸರು ತನಿಖೆ ಕೈಗೊಂಡ ಬಳಿಕ ಪ್ರವಾಸೋದ್ಯಮ ಇಲಾಖೆಗೆ ಸಂಬಂಽಸಿದಂತೆ ಒಟ್ಟು ೧೯ ಜನರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬಂಧ ೩ ಹಾಗೂ ಹಿಂದುಳಿದ ವರ್ಗ, ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ ಮತ್ತು ಕೈಮಗ್ಗ, ಜವಳಿ ಇಲಾಖೆಗೆ ಸಂಬಂಽಸಿದಂತೆ ತಲಾ ಇಬ್ಬರು ಒಳಗೊಂಡು ಒಟ್ಟು ೨೮ ಜನರನ್ನು ಬಂಽಸಿದ್ದರು. ಸದ್ಯ ಅವರೆಲ್ಲವರೂ ಈಗ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದಾರೆ. ಐದು ಇಲಾಖೆಗಳು ಸೇರಿದಂತೆ ಒಟ್ಟು ೬.೦೮ ಕೋಟಿ ರೂ. ಹಗರಣ ಇದಾಗಿದ್ದರಿಂದ ನಿಯಮದಂತೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಇಲಾಖೆ ಸಿಬ್ಬಂದಿ ಪಾತ್ರ ಬಯಲಾಗಬೇಕಿದೆ :
ಈ ವರೆಗೂ ಸಿಇಎನ್ ಪೊಲೀಸರು ನಡೆಸಿರುವ ತನಿಖೆಯಲ್ಲಿ ಇಡೀ ಹಗರಣದಲ್ಲಿ ಬ್ಯಾಂಕ್ ಅಽಕಾರಿಗಳು, ಸಿಬ್ಬಂದಿ ಹಾಗೂ ಹಣ ವರ್ಗಾವಣೆ ಮಾಡಿಸಿಕೊಂಡಿರುವ ವ್ಯಕ್ತಿಗಳ ಹೆಸರು ಮಾತ್ರ ಬಯಲಿಗೆ ಬಂದಿದೆ. ಆದರೆ, ಯಾವುದೇ ಇಲಾಖೆಗಳ ಅಽಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಏನು ಎನ್ನುವುದು ಬೆಳಕಿಗೆ ಬಂದಿಲ್ಲ.

ಐದು ಇಲಾಖೆಗಳ ಸರ್ಕಾರದ ದುಡ್ಡನ್ನು ಮೂರು ವರ್ಷಗಳಿಂದ ಹೀಗೆ ಹಂತ ಹಂತವಾಗಿ ಬ್ಯಾಂಕ್ ಅಽಕಾರಿಗಳು ಹಾಗೂ ಸಿಬ್ಬಂದಿ ಶಾಮಿಲಾಗಿ ಹಣ ದೋಚುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಏನು ಮಾಡುತ್ತಿದ್ದರು? ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾಽಕಾರಿಗಳ ಹೆಸರಿನಲ್ಲಿ ಇರುವ ಖಾತೆಯಿಂದಲೇ ಹಣ ದೋಚಿದ್ದಾರೆ. ಮೂರು ವರ್ಷಗಳ ಕಾಲ ಅಕ್ರಮ ನಡೆದರೂ ಜಿಲ್ಲಾಽಕಾರಿಗಳಿಂದ ಹಿಡಿದು ಇಲಾಖೆಯ ಅಽಕಾರಿಗಳು ಯಾಕೆ ಮೌನ ವಹಿಸಿದ್ದರು ಇದಕ್ಕೆ ಈ ವರೆಗೂ ಉತ್ತರ ಸಿಕ್ಕಿಲ್ಲ. ಮುಖ್ಯವಾಗಿ ಇಲಾಖೆಗಳು ವಾರ್ಷಿಕ ಲೆಕ್ಕಪರಿಶೋದನೆಯನ್ನೆ ನಡೆಸಿಲ್ಲ. ಕೆಲ ಇಲಾಖೆಗಳಲ್ಲಿ ಕ್ಯಾಶ್ ಬುಕ್ ನಿರ್ವಹಣೆ ಮಾಡಿಲ್ಲ. ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದರೂ ಈ ಕ್ಷಣದ ವರೆಗೂ ಹಣ ವಂಚನೆಗೆ ಸಿಲುಕಿರುವ ಇಲಾಖೆಗಳ ಅಽಕಾರಿಗಳು ಮತ್ತು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿಲ್ಲ. ಇಲ್ಲಿ ಹಣ ಗುಳಂ ಮಾಡಿರುವ ಪ್ರಕರಣದಲ್ಲಿ ಅಽಕಾರಿಗಳ ಪಾತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ದಿವ್ಯ ನಿರ್ಲಕ್ಷ್ಯವಂತೂ ಇರುವುದು ಬಹಳ ಸ್ಪಷ್ಟವಾಗಿ ಕಂಡು ಬರುತ್ತಿದೆ. ಹಣ ವಂಚನೆ ಆಗಿರುವ ಅಷ್ಟೂ ಅವಽಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರು ಯಾರೆಲ್ಲ ಇದ್ದರೋ ಅವರು ಸಹ ಸರ್ಕಾರದ ದುಡ್ಡು ಪೋಲು ಆಗಿರುವುದಕ್ಕೆ ಅಷ್ಟೆ ಹೊಣೆ. ಹೀಗಾಗಿ ಅವರನ್ನು ಜವಾಬ್ದಾರರನ್ನಾಗಿಬೇಕು. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ತನಿಖೆಗೆ ಸಿಐಡಿ ತನಿಖಾಽಕಾರಿಗಳು ಮುಂದಾಗುತ್ತಾರಾ? ಕಾಯ್ದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net