ಸಿಎನ್‌ಸಿಯಿಂದ ಜನಜಾಗೃತಿ ಮಾನವ ಸರಪಳಿ

7 vpt 2.2
Published on

ವಿರಾಜಪೇಟೆ: ಕೊಡವ ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ತಡೆಯದಿದ್ದಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಆದಿಮ ಸಂಜಾತ ಕೊಡವ ಕುಲದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು.

ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದಾಪುರದ ಸಾವಿರಾರು ಎಕರೆ ಕಾಫಿ ತೋಟ ಸೇರಿದಂತೆ ಕೊಡಗಿನ ವಿವಿಧೆಡೆ ಕೃಷಿ ಭೂಮಿಯಲ್ಲಿ ಬೃಹತ್ ನಗರ ನಿರ್ಮಿಸುವ ಹುನ್ನಾರ ನಡೆಯುತ್ತಿದೆ. ಬರಪೊಳೆ, ಕೊಂಗಣಪೊಳೆ, ಕಾವೇರಿ ನದಿಯ ಉಪ ನದಿಗಳಿಗೆ ಜೀವ ಸೆಲೆಯಾಗಿರುವ ಕೊಡವ ಲ್ಯಾಂಡ್‌ನ ಆಯಕಟ್ಟಿನ ಸ್ಥಳವಾದ ಪೆರುಂಬಾಡಿ, ಬಾಳುಗೋಡು, ನಾಂಗಾಲ, ಬಿಟ್ಟಂಗಾಲದಲ್ಲಿ 2020-21ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ದುರ್ಬಳಕೆಯಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ ಲೂಟಿ ಮಾಡಿ ಕೊಡವ ಜನಪದ ಸಂಸ್ಕೃತಿಯ ಗರ್ಭಗುಡಿಯಾದ ಮಂದ್, ಗ್ರಾಮದೇವತೆ-ನಾಡ್ ದೇವತೆಗಳ ನೆಲೆಗಳನ್ನು ಧ್ವಂಸ ಮಾಡಿ ಕೊಡವ ಜನಾಂಗೀಯ ಹೆಗ್ಗುರುತಿನ ನರಮಂಡಲವಾಗಿರುವ ಪೆರವನಾಡ್, ಬೇರಳಿನಾಡ್ ಮತ್ತು ಕುತ್ತ್ನಾಡ್ ಪ್ರದೇಶದ ಜನಸಂಖ್ಯಾ ಪಲ್ಲಟಕ್ಕೆ ಸಂಚು ರೂಪಿಸುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಮಾಫಿಯಾ, ಆರ್ಥಿಕ ಟೌನ್‌ಶಿಪ್, ವಿಲ್ಲಾ ಮತ್ತು ರೆಸಾರ್ಟ್‌ಗಳ ಮೂಲಕ ಕೊಡವ ಲ್ಯಾಂಡ್‌ನ ಪಾವಿತ್ರೃತೆಯನ್ನು ಮಲಿನ ಮಾಡಿ ಜಲಮೂಲ ಬಸಿದು, ಭೂಗರ್ಭ ಸೀಳಿ ರಮಣೀಯ ನಿಸರ್ಗ, ಮನಮೋಹಕ ಪರ್ವತ ಶ್ರೇಣಿಗಳನ್ನು ನಾಶ ಮಾಡಲಾಗುತ್ತಿದೆ. ಕೊಡವರು ನಡೆಸುತ್ತಿರುವ ಪರಿಸರ ಸ್ನೇಹಿ ಹೋಂ ಸ್ಟೇಗಳ ವಿರುದ್ಧ ರೆಸಾರ್ಟ್ ಮಾಫಿಯಾಗಳು ಸಂಚು ರೂಪಿಸುತ್ತಿವೆ. ಕೊಡವರು ಸಂಚರಿಸುವ ಸಾಂಪ್ರದಾಯಿಕ ರಸ್ತೆಗಳಿಗೆ ಬೇಲಿ ನಿರ್ಮಿಸಿ ಅಡ್ಡಿಪಡಿಸುತ್ತಿವೆ.

ಪ್ರಕೃತಿಯ ಮೇಲೆ ಯಾವುದೇ ರೀತಿಯ ದಾಳಿಯಾದರೂ ಆಡಳಿತ ವ್ಯವಸ್ಥೆ ಮಾತ್ರ ತಟಸ್ಥ ಧೋರಣೆ ಅನುಸರಿಸುತ್ತಿದೆ. ಗ್ರೀನ್‌ಬೆಲ್ಟ್ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ, ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನೆ ಮತ್ತು ರಕ್ಷಣೆ ಇಲ್ಲದಾಗಿದೆ.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂ ರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಕರೆ ನೀಡಿದರು.

ಮುದ್ದಿಯಡ ಲೀಲಾವತಿ, ಮಾಳೇಟಿರ ವಿಮಲಾ, ನೆಲ್ಲಮಕ್ಕಡ ಯಶೋದಾ, ಪೊನ್ನಕಚ್ಚಿರ ಶೈಲಾ, ಮಳವಂಡ ಕವಿತಾ, ಪೊಕೊರ್ಂಡ ದಕ್ಷ, ಪೊಕೊರ್ಂಡ ನಿಶಾ, ಬುಟ್ಟಿಯಂಡ ಸೋಮಣ್ಣ, ಪೊನ್ನಕಚ್ಚಿರ ಪವಿತ್ರಾ, ಕುಲ್ಲಚಂಡ ಬೋಪಣ್ಣ, ಚೊಟ್ಟೆಮಂಡ ಪ್ರವೀಣ್ ಮತ್ತಿತರು ಪಾಲ್ಗೊಂಡು ಸಿಎನ್‌ಸಿಯ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net