ಸಿಎಎ ಮುಸ್ಲಿಂ ವಿರೋಧಿಯಲ್ಲ

30-hvr-05
Published on

ಹಾವೇರಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದಲ್ಲಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನೂರಾರು ವಿದ್ಯಾರ್ಥಿಗಳ ಸಹಯೋಗದಲ್ಲಿ 250 ಮೀಟರ್ ಉದ್ದದ ತ್ರಿವರ್ಣ ಧ್ವಜದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.

ಜಿಎಚ್ ಕಾಲೇಜಿನಿಂದ ಆರಂಭಗೊಂಡ ಯಾತ್ರೆ ಪಿಬಿ ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ, ಮೈಲಾರ ಮಹಾದೇವಪ್ಪ ಹಾಗೂ ಜೆಪಿ ಸರ್ಕಲ್ ಮಾರ್ಗವಾಗಿ ಜೆಎಚ್ ಪಟೇಲ್ ವೃತ್ತ ತಲುಪಿತು. ಯಾತ್ರೆ ಉದ್ದಕ್ಕೂ ವಿದ್ಯಾರ್ಥಿಗಳು ಸಿಎಎ ಪರ ಘೊಷಣೆ ಕೂಗಿ ಗಮನ ಸೆಳೆದರು. ನಗರದ ವಿವಿಧ ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಎಬಿವಿಪಿ ಸಂಘಟನೆಯ ವಿಭಾಗೀಯ ಸಂಚಾಲಕ ಗಂಗಾಧರ ಅಂಜಗಿ ಮಾತನಾಡಿ, ಸಿಎಎ ಮುಸ್ಲಿಂ ವಿರೋಧಿಯಲ್ಲ. ಭಾರತೀಯ ಮುಸ್ಲಿಂರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪೌರತ್ವ ತಿದ್ದಪಡಿ ಕಾಯ್ದೆ ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲದಿದ್ದಾಗ ಭಾರತವನ್ನು ಆಶ್ರಯಿಸಿ ಬರುವ ಹಿಂದುಗಳಿಗೆ ನೆಲೆ ಕಲ್ಪಿಸುವುದಾಗಿದೆ ಎಂದರು.

ದೇಶ ವಿಭಜನೆಯ ಸಂದರ್ಭದಲ್ಲಿ ಪರಿಸ್ಥಿತಿಯ ಅನಿವಾರ್ಯತೆಯಿಂದ ಅನೇಕರು ಪಾಕಿಸ್ತಾನಕ್ಕೆ ಹೋಗಿದ್ದರೂ ಅವರು ನಮ್ಮವರು. ಅವರಿಗೆ ಶಾಸನಬದ್ಧ ಹಕ್ಕುಗಳೊಂದಿಗೆ ಪೂರ್ಣ ರಕ್ಷಣೆ ಹಾಗೂ ಅವಕಾಶಗಳನ್ನು ನೀಡಬೇಕು ಎನ್ನುವುದು ಕಾಯ್ದೆಯ ಉದ್ದೇಶವಾಗಿದೆ ಎಂದರು.

ಅಕ್ರಮ ವಲಸಿಗರಿಂದ ಭಾರತದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ವಲಸಿಗರನ್ನು ತಡೆಗಟ್ಟಿದರೆ ದೇಶ ಆರ್ಥಿಕವಾಗಿ ಬಲಿಷ್ಠವಾಗಲಿದೆ. ಬಾಂಗ್ಲಾದೇಶದ ಗಡಿಯುದ್ದಕ್ಕೂ ಅಕ್ರಮ ವಲಸೆಗಾರರು ದೇಶದೊಳಗೆ ನುಗ್ಗುತ್ತಿರುವುದರಿಂದ ಉಂಟಾಗುವ ಸಮಸ್ಯೆಗಳ ಕುರಿತು ದೇಶದ ಗಮನ ಸೆಳೆಯಲಾಗುತ್ತಿದೆ ಎಂದರು.

ಗಾಂಧೀಜಿ, ಪಟೇಲ್, ನೆಹರು ಸೇರಿ ರಾಷ್ಟ್ರ ನಾಯಕರು ನೀಡಿದ್ದ ಭರವಸೆಗೆ 70ವರ್ಷಗಳ ನಂತರ ನ್ಯಾಯ ಸಿಕ್ಕಿದೆ. ಇದನ್ನು ಕೆಲವು ಸಂಘಟನೆಗಳು, ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಜನರಲ್ಲಿ ತಪ್ಪು ತಿಳುವಳಿಕೆ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲು ಬೇರೆ ಕಡೆಯಿಂದ ಹಣ ಸಂದಾಯವಾಗುತ್ತಿದೆ ಎಂದರು.

ಎಬಿವಿಪಿ ಜಿಲ್ಲಾ ಸಂಚಾಲಕ ಕಿರಣ ಕೆ., ಸಂತೋಷ, ಸಂಜಯ, ಪ್ರಕಾಶ, ಕಿರಣ ಕೆ.ಎಸ್., ಕಿರಣ ಬಣಕಾರ, ಮಂಜುನಾಥ ಕೆ, ಲಕ್ಷ್ಮಣ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net