

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಅವರು ಬಡವರ, ದೀನ-ದಲಿತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುತ್ತಾರೆ ಎನ್ನುವುದಕ್ಕೆ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನವನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಹಾಲು ಹಾಗೂ ಬ್ರೇಡ್ ವಿತರಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ಗಳನ್ನು ನೋಡಿದರೆ ಅವರಿಗೆ ಮಧ್ಯಮ ಹಾಗೂ ಬಡಜನರ ಮೇಲಿನ ಕಾಳಜಿ ಎಂತಹದ್ದು ಎಂದು ಗೊತ್ತಾಗುತ್ತದೆ ಎಂದರು.
ರಾಜ್ಯದಲ್ಲಿ ಈಚೆಗೆ ಜರುಗಿದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅನೇಕರು ಮಾತನಾಡುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಅಽಕಾರ ಹಿಡಿದ ಕೆಲವೇ ತಿಂಗಳಲ್ಲಿ ೪ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಆರ್ಥಿಕ ತಜ್ಞ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಅವರ ಗಟ್ಟಿ ನಿಲುವು, ಸ್ವಭಾವ ಹಾಗೂ ಗುಣಗಳಿಂದಲೇ ವಿರೋಧ ಪಕ್ಷದವರಿಂದಲೂ ಮೆಚ್ಚುಗೆ ಪಡೆದು ಧೀಮಂತ ನಾಯಕರಾಗಿದ್ದಾರೆ ಎಂದು ಹೇಳಿದರು.
ನಾಲ್ಕುವರೆ ದಶಕಕ್ಕಿಂತ ಹೆಚ್ಚಿನ ಕಾಲ ರಾಜಕೀಯದಲ್ಲಿರುವ ಸಿದ್ದರಾಮಯ್ಯನವರಿಗೆ ರಾಜ್ಯದ ಉದ್ದಗಲದ ಎಲ್ಲ ಮಾಹಿತಿಯನ್ನು ಹೊಂದಿದ್ದಾರೆ. ಮಾತೃ ಹೃದಯಿಯಾಗಿರುವ ಅವರು, ರೈತರು ಹಾಗೂ ದೀನ ದಲಿತರ ಪರವಾಗಿ ಧ್ವನಿ ಎತ್ತಿದವರು. ಹಸಿವಿನಿಂದ ರಾಜ್ಯದ ಜನ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಮೂಲಕ ರಾಜ್ಯದ ಹಸಿವನ್ನು ನೀಗಿಸಿದವರು ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಸದಾ ಬಡವರ ಬಗ್ಗೆ ಯೋಚಿಸುವ ಸಿದ್ದರಾಮಯ್ಯ ಅವರು, ನಾಡು ಕಂಡ ಧೀಮಂತ ನಾಯಕ. ಜನರ ಸೇವೆ ಮಾಡಬೇಕೆಂದೇ ರಾಜಕೀಯಕ್ಕೆ ಬಂದಿರುವ ಅವರು, ರಾಜ್ಯದ ಜನರ ಜೀವನ ಮಟ್ಟ ಸುಧಾರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲಿಯವರೆಗೆ ಮಂಡಿಸಿರುವ ೧೪ ಬಜೆಟ್‌ಗಳು ರಾಜ್ಯದ ಮೇಲೆ ಹೊರೆಯಾಗಿಲ್ಲ ಎಂದರು.
ಮುಖಂಡರಾದ ಎಸ್.ಎನ್.ರಾಂಪುರ, ಮುತ್ತು ಜೋಳದ, ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ವೈ.ವೈ.ತಿಮ್ಮಾಪುರ, ರಾಜು ಮನ್ನಿಕೇರಿ ಇತರರಿದ್ದರು.