

ಶಿರಸಿ: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಭಯಾನಕ ಕರೊನಾ ಸೋಂಕು ನಿವಾರಣೆಗೆ ಸರ್ಕಾರದ ಜೊತೆಯಾಗಲು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಹತ್ತರ ಹೆಜ್ಜೆಯನ್ನಿಟ್ಟು ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ಜಮಾ ಮಾಡಿದೆ.
ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಹಾಗೂ ಸದಸ್ಯರು ಇತ್ತೀಚೆಗೆ ಎಪಿಎಂಸಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ ಅವರಿಗೆ 1 ಕೋಟಿ ರೂ. ಮೌಲ್ಯದ ಚೆಕ್ ಹಸ್ತಾಂತರಿಸಿದರು. ಕರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರ ಈಗಾಗಲೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೋಟ್ಯಾಂತರ ರೂ.ಗಳನ್ನು ವಿನಿಯೋಗಿಸಿದೆ. ಆದರೂ ಜನಸಾಮಾನ್ಯರಿಗೆ ಕರೊನಾ ವೈರಸ್ ಭೀಕರತೆ ಅರ್ಥ ಆದಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಓಡಾಡದಂತೆ ಸೂಚಿಸಿದರೂ ಜನತೆ ನಿರ್ಲಕ್ಷ್ಯವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಅಧ್ಯಕ್ಷ ವಿಶ್ವನಾಥ ಹೆಗಡೆ ಹೇಳಿದರು. ಈ ವೇಳೆ ಎಪಿಎಂಸಿ ಉಪಾಧ್ಯಕ್ಷೆ ವಿಮಲಾ ಹೆಗಡೆ, ಸದಸ್ಯರಾದ ಸುನೀಲ ನಾಯ್ಕ, ಕೆರಿಯಾ ಬೋರ್ಕರ್, ಪ್ರಶಾಂತ ಗೌಡ, ಲಕ್ಷ್ಮಿನಾರಾಯಣ ಹೆಗಡೆ, ಶಿವಕುಮಾರ್ ಗೌಡ, ಸಿಬ್ಬಂದಿ ಅಶೋಕ ಪಡುವಳ್ಳಿ, ವಿ.ಎಸ್. ಕಾಮತ್, ಮಂಗಲಾ ಹೆಗಡೆ ಉಪಸ್ಥಿತರಿದ್ದರು.