ಸಿಎಂ ಕೌಶಲ ಅಭಿವೃದ್ಧಿ ಕೇಂದ್ರಗಳು ಬಂದ್!

14BGV_Jaggu 2
Published on

ಜಗದೀಶ ಹೊಂಬಳಿ ಬೆಳಗಾವಿ

ಯುವಕ, ಯುವತಿಯರಿಗೆ ಕೌಶಲ ಅಭಿವೃದ್ಧಿ ಜತೆಗೆ ತರಬೇತಿ ನೀಡಿ ಅವರ ಜೀವನಮಟ್ಟ ಸುಧಾರಿಸುವ ಸಲುವಾಗಿ ಮುಖ್ಯಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೆರೆಯಲಾಗಿತ್ತು. ಆದರೆ, ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕೇಂದ್ರಗಳು ಬಾಗಿಲು ಮುಚ್ಚಿವೆ. ಇದರಿಂದ ಉದ್ಯೋಗದ ಕನಸಿನಲ್ಲಿದ್ದ ಯುವಕರಿಗೆ ನಿರಾಸೆಯಾಗಿದೆ.

8 ಸಾವಿರ ಕೇಂದ್ರಗಳು ಬಂದ್?: ಮುಖ್ಯಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ಆರಂಭದಲ್ಲಿ ರಾಜ್ಯದಲ್ಲಿ 64 ರೀತಿಯ ಕೌಶಲ ತರಬೇತಿ ನೀಡುವ ಸುಮಾರು 8 ಸಾವಿರ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಆಯಾ ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ಈ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ತರಬೇತಿ ಕೇಂದ್ರಗಳಿಗೆ ದಾಖಲಾಗುವವರಿಗೆ ಮೂರು ತಿಂಗಳು ವಿವಿಧ ಕೌಶಲ ತರಬೇತಿ ನೀಡುವುದರ ಜತೆಗೆ ಸ್ವಂತ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿತ್ತು.

ಜತೆಗೆ ತರಬೇತಿ ಪಡೆದಿರುವ ಕುರಿತು ಪ್ರಮಾಣಪತ್ರ ವಿತರಿಸಲಾಗುತ್ತಿತ್ತು. ಈ ಕೌಶಲ ಅಭಿವೃದ್ಧಿ ಕೇಂದ್ರಗಳಿಗೆ ಸರ್ಕಾರ ಪ್ರತಿವರ್ಷ ಕಾರ್ಯಾದೇಶ ನೀಡುತ್ತಿತ್ತು. ಆದರೆ, ಕಳೆದ ಎರಡು ವರ್ಷದಿಂದ ಈ ಕೇಂದ್ರಗಳಿಗೆ ಸರ್ಕಾರ ಕಾರ್ಯಾದೇಶ ನೀಡದ ಪರಿಣಾಮ ಕೇಂದ್ರಗಳು ಬಾಗಿಲು ಹಾಕಿವೆ. ರಾಜ್ಯದ ಕೆಲವೆಡೆೆ ಮಾತ್ರ ಆರಂಭ ಇವೆ. ಬೆಳಗಾವಿ ಜಿಲ್ಲೆಯಲ್ಲೂ 48 ಕೇಂದ್ರಗಳು ಬಂದ್ ಆಗಿವೆ.

ಶೇ.70ರಷ್ಟು ಜನರಿಗೆ ಉದ್ಯೋಗ ನೀಡುವ ಯೋಜನೆ: ಮುಖ್ಯಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 2016-17ರಲ್ಲಿ ಅಂದಾಜು 8 ಸಾವಿರ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಜಿಲ್ಲೆಗಳಲ್ಲಿ ಪ್ರತಿವರ್ಷ 5 ಲಕ್ಷ ಯುವಕರಿಗೆ ತರಬೇತಿ ಕೊಡುವುದಿತ್ತು. ಒಂದು ಬ್ಯಾಚ್‌ನಲ್ಲಿ ತರಬೇತಿ ಪಡೆಯುತ್ತಿದ್ದ 30 ಜನರಲ್ಲಿ ಕನಿಷ್ಠ ಶೇ.70ರಷ್ಟು ಜನರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿತ್ತು. ಸರ್ಕಾರ ನಿಗದಿಪಡಿಸಿದ ಮಾನದಂಡಗಳಂತೆ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿತ್ತು. ಆದರೆ, ಗ್ಯಾರಂಟಿಗಳ ಬೆನ್ನು ಬಿದ್ದಿರುವ ಸರ್ಕಾರ ಯೋಜನೆಯ ಮೂಲ ಆಶಯ ಬದಿಗಿಟ್ಟಿದೆ. ಪದವಿ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದವರಿಗೆ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಮೂಲಕ ಯುವ ಸಮೂಹಕ್ಕೆ ಹಣ ನೀಡುವ ಸರ್ಕಾರ, ಕೌಶಲ ಯೋಜನೆಯಿಂದ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುವ ಯೋಜನೆಗೆ ಅನುದಾನ ನೀಡದೆ ತಾರತಮ್ಯ ಅನುಸರಿಸುತ್ತಿರುವುದು ಖೇದಕರ ಸಂಗತಿಯಾಗಿದೆ.

ಏನೆಲ್ಲ ತರಬೇತಿ..?: ಮುಖ್ಯಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳಲ್ಲಿ ಪಾರ್ಲರಿಂಗ್, ಟೈಲರ್, ಪರಿಸರ ಪ್ರವಾಸೋದ್ಯಮ, ಡೇಟಾ ಎಂಟ್ರಿ, ನರ್ಸಿಂಗ್ ಸೇರಿ ಜೀವನಾಧಾರಕ್ಕೆ ಬೇಕಾಗುವ ಅಗತ್ಯ ಇರುವ 64 ರೀತಿಯ ವಿವಿಧ ತರಬೇತಿ ನೀಡಲಾಗುತ್ತಿತ್ತು.

ಮುಖ್ಯಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳು ಕಾರಣಾಂತರ ಗಳಿಂದ ಬಂದ್ ಆಗಿವೆ. 2-3 ತಿಂಗಳಲ್ಲಿ 2.0 ಯೋಜನೆ ಆರಂಭಿಸಲಿದ್ದಾರೆ. ಜಿಲ್ಲೆಗಳಲ್ಲಿನ ಕೈಗಾರಿಕೆ, ದೊಡ್ಡ ದೊಡ್ಡ ತರಬೇತಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಯೋಜನೆ ಮರು ಚಾಲನೆ ಮಾಡುವವರಿದ್ದಾರೆ. ಅಗತ್ಯಕ್ಕನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ವಿವಿಧ ತರಬೇತಿ ಮುಂದಿನ ದಿನಗಳಲ್ಲಿ ನಡೆಯಲಿದೆ.

| ರಾಜಶೇಖರ ಚಿಕ್ಕಮಠ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net